ವಾಹನ ನಿಲುಗಡೆ ಸ್ಥಳದಲ್ಲಿ ನ್ಯಾಯಾಂಗ ನೌಕರರ ಕಟ್ಟಡ ನಿರ್ಮಿಸಲು ಮುಂದಾಗಿರುವುದಕ್ಕೆ ವಿರೋಧ..
Cnewstv.in / 05.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವಾಹನ ನಿಲುಗಡೆ ಸ್ಥಳದಲ್ಲಿ ನ್ಯಾಯಾಂಗ ನೌಕರರ ಕಟ್ಟಡ ನಿರ್ಮಿಸಲು ಮುಂದಾಗಿರುವುದಕ್ಕೆ ವಿರೋಧ..
ಶಿವಮೊಗ್ಗ: ನ್ಯಾಯಾಂಗ ಆವರಣದಲ್ಲಿ ನ್ಯಾಯಧೀಶರು, ವಕೀಲರು, ನೌಕರರು ಮತ್ತು ಕಕ್ಷಿದಾರರ ವಾಹನ ನಿಲುಗಡೆ ಸ್ಥಳದಲ್ಲಿ ನ್ಯಾಯಾಂಗ ನೌಕರರ ಕಟ್ಟಡ ನಿರ್ಮಿಸಲು ಮುಂದಾಗಿರುವುದರನ್ನು ಶೀವಮೊಗ್ಗ ವಕೀಲರ ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ ಎಂದು ಶಿವಮೊಗ್ಗ ಬಾರ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಬಿ.ಜಿ. ಶಿವಮೂರ್ತಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಕೀಲರ ಸಂಘ ಶತಮಾನಗಳಿಗಿಂತ ಹಳೆಯ ಸಂಘವಾಗಿದ್ದು, ರಾಜ್ಯ ಮತ್ತು ದೇಶದಲ್ಲಿ ತನ್ನ ಚಟುವಟಿಕೆಗಳ ಮೂಲಕ ಹೆಗ್ಗಳಿಕೆ ಪಡೆದಿದೆ. ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ, ಜೆ.ಹೆಚ್. ಪಟೇಲ್, ಎಸ್. ಬಂಗಾರಪ್ಪ ಮುಂತಾದ ಗಣ್ಯರು ಈ ಸಂಘದ ಸದಸ್ಯರಾಗಿ ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡವರು.
ಈಗ ಹಾಲಿ ಇರುವ ನ್ಯಾಯಾಲಯ ಕಟ್ಟಡವು 1972 ರಲ್ಲಿ ನಿರ್ಮಾಣವಾಗಿದ್ದು, ಮುಂದಿನ ಹಲವು ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸದರಿ ನ್ಯಾಯಾಲಯದ ನಿರ್ಮಾಣದ ಸಂದರ್ಭದಲ್ಲಿ ಕಕ್ಷಿದಾರರುಗಳಿಗೆ ಮತ್ತು ನ್ಯಾಯಾಲಯಕ್ಕೆ ಬರುವ ವಕೀಲರಿಗೆ ವಾಹನಗಳ ಸಂಖ್ಯೆಯ ಅಂದಾಜಿನ ಮೇಲೆ ಕಟ್ಟಡಗಳ ಸುತ್ತಲೂ ವಾಹನಗಳ ನಿಲುಗಡೆಗೆ ಜಾಗ ಕಾಯ್ದಿರಿಸಿದೆ ಎಂದರು.
1972 ರಲ್ಲಿ 70ರಷ್ಟಿದ್ದ ವಕೀಲರ ಸಂಖ್ಯೆ ಈಗ 1250 ರಷ್ಟಾಗಿದೆ. ಜೊತೆಗೆ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಪೊಲೀಸ್ ವಾಹನಗಳು ಮತ್ತು ಸರ್ಕಾರಿ ನೌಕರರ ವಾಹನಗಳಿಗೆ ಪಾರ್ಕಿಂಗ್ ಜಾಗ ಸಾಕಾಗುತ್ತಿಲ್ಲ. ಈ ನಡುವೆ ಏಕಾಏಕಿ ನಿಯಮಬಾಹಿರವಾಗಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ವಕೀಲರ ಭವನದ ಮುಂಭಾಗದ ವಾಹನ ನಿಲುಗಡೆ ಜಾಗದಲ್ಲಿ ನ್ಯಾಯಾಂಗ ನೌಕರರು ಯಾವುದೇ ಅನುಮತಿ ಪಡೆಯದೇ ರಾತ್ರೋರಾತ್ರಿ ಸ್ಥಳದಲ್ಲಿದ್ದ ದೊಡ್ಡ ಮರ ಕಡಿದು ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದೆ. ಇದನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೂಗಳತೆ ದೂರದಲ್ಲಿ ನ್ಯಾಯಾಂಗ ನೌಕರರನ್ನು ಒಳಗೊಂಡಂತೆ ಸರ್ಕಾರಿ ನೌಕರರ ಭವನ ಇದ್ದಾಗ್ಯೂ ನ್ಯಾಯಾಂಗ ನೌಕರರಿಗೆ ಹೊಸದಾಗಿ ಇನ್ನೊಂದು ಕಟ್ಟಡ ನಿರ್ಮಿಸುತ್ತಿರುವುದು ದುರುದ್ದೇಶದಿಂದ ಕೂಡಿದ್ದು, ಸರ್ಕಾರದ ಹಣದ ದುಂದುವೆಚ್ಚವಾಗಿದೆ. ಈ ಕಟ್ಟಡ ನಿರ್ಮಾಣದಿಂದ ಗಾಳಿ, ಬೆಳಕಿಗೆ ತೊಂದರೆಯಾಗುವುದಲ್ಲದೇ, ವಾಹನ ನಿಲುಗಡೆಗೆ
ಜಾಗವಿಲ್ಲದಂತಾಗುತ್ತದೆ. ಮತ್ತು ಜಿಲ್ಲಾಧಿಕಾರಿಗಳು ಕೂಡ ಇದಕ್ಕೆ ಅನುಮತಿ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಕಾಮಗಾರಿ ಕೈಬಿಡಬೇಕೆಂದು ಬಾರ್ ಅಸೋಸಿಯೇಷನ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಪ್ಪ, ಖಜಾಂಚಿ ಎಸ್. ಗಿರೀಶ್, ಡಿ.ಬಿ. ಚಂದ್ರಕುಮಾರ್, ಜಿ. ವಿದ್ಯಾರಾಣಿ ಮೊದಲಾವರಿದ್ದರು.
ಇದನ್ನು ಒದಿ : https://cnewstv.in/?p=9692
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ವಾಹನ ನಿಲುಗಡೆ ಸ್ಥಳದಲ್ಲಿ ನ್ಯಾಯಾಂಗ ನೌಕರರ ಕಟ್ಟಡ ನಿರ್ಮಿಸಲು ಮುಂದಾಗಿರುವುದಕ್ಕೆ ವಿರೋಧ.. 2022-05-05