Cnewstv.in / 30.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮರುಜೀವ ಪಡೆದ ಶ್ರೀರಂಗನಾಥಸ್ವಾಮಿ ದೇಗುಲದ ಕಲ್ಯಾಣಿ.
ಶಿವಮೊಗ್ಗ : ನರೇಗಾ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಪಿಳ್ಳೆಂಗೆರೆ ಗ್ರಾಮದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಮರುಜೀವ ಬಂದು ರಮಣೀಯವಾಗಿ ಕಾಣುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “100 ದಿನ ಜಲಶಕ್ತಿ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಜಲ ಮೂಲಗಳನ್ನು ಗುರುತಿಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಮಾಡಲಾಗಿದೆ.
ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸುಮಾರು 700 ವರ್ಷದ ಇತಿಹಾಸವಿದ್ದು, ದೇವಸ್ಥಾನ ಆವರಣದ ಕಲ್ಯಾಣಿಯಲ್ಲಿರುವ ಜಲವನ್ನು ದೇವಸ್ಥಾನಕ್ಕೆ ಬಳಸಲಾಗುತ್ತಿತ್ತು. ಆದರೆ ಸುಮಾರು 30 ವರ್ಷಗಳಿಂದ ಕಲ್ಯಾಣಿ ಜಲವು ಬತ್ತಿಹೋಗಿದ್ದು, ಕಲ್ಯಾಣಿಯ ಸುತ್ತಲು ಗಿಡ ಗಂಟಿಗಳಿಂದ ತುಂಬಿ ಕಲ್ಯಾಣಿಯ ಗುರುತು ಇಲ್ಲದಂತಹ ಪರಸ್ಥಿತಿ ನಿರ್ಮಾಣವಾಗಿತ್ತು.
ಜಲಶಕ್ತಿ ಅಭಿಯಾನ ಕಾರ್ಯಕ್ರಮದ ಮೂಲಕ “ಕ್ಯಾಚ್ ದಿ ರೈನ್” ಶೀರ್ಷಿಕೆಯಡಿಯಲ್ಲಿ ಜಿಲ್ಲೆಯ ಜಲಮೂಲಗಳಾದ ನದಿ, ಕೆರೆ, ಕಲ್ಯಾಣಿ, ಗೋಕಟ್ಟೆಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸುವ ಮೂಲಕ ಪಿಳ್ಳಂಗೆರೆ ಗ್ರಾಮ ಪಂಚಾಯತಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿರುವ ಕಲ್ಯಾಣಿಯ ಪುನಶ್ಚೇತನಕ್ಕೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು 2021 ರ ಏಪ್ರಿಲ್ 24 ರಂದು ಶಂಕುಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಸುಮಾರು ರೂ.5.00 ಲಕ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಈ ಯೋಜನೆಯಡಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಹೊಸ ಮೆರುಗು ಬಂದಿದೆ. ಗ್ರಾಮ ಪಂಚಾಯತಿಯಿಂದ ಕಲ್ಯಾಣಿ ಸುತ್ತಲು ಗಿಡಗಳನ್ನು ನೆಡಲಾಗಿದೆ. ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಳೆಯಾದ ಕಾರಣ ಕಲ್ಯಾಣಿ ಸಂಪೂರ್ಣ ಭರ್ತಿಗೊಂಡು, ಸುತ್ತ ಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಲ್ಯಾಣಿಯ ಪ್ರಶಾಂತತೆಯ ನೋಟ ಹಾಗೂ ತುಂಗಾ ತೀರದ ತಟವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಕಲ್ಯಾಣಿಗೆ ಮರುಜೀವ ಬಂದಿದೆ.
ವರದಿ: ಭರತ್ ಎಂ.ಎಸ್
100 ದಿನ ಜಲಶಕ್ತಿ ಅಭಿಯಾನ”ದ ಅಡಿಯಲ್ಲಿ ಜಿಲ್ಲೆಯ 12 ಕಲ್ಯಾಣಿಗಳು, 156 ಕುಂಟೆಗಳು, 24 ಗೊಕಟ್ಟೆ, 86 ಕೆರೆಗಳು ಹಾಗೂ 61 ಕಟ್ಟೆಗಳನ್ನು ಪುನಶ್ಚೇತನಗೊಳಿಸಿದ್ದೇವೆ. ಪಿಳ್ಳಂಗೆರೆ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಮತ್ತು ಕಾಮಗಾರಿ ಅನುμÁ್ಠನವಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿನ ಸ್ಥಳೀಯರಿಗೆ, ಭಕ್ತರಿಗೆ ಮತ್ತು ಅರ್ಚಕರಿಗೆ ತುಂಬಾ ಖುಷಿಯಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಒಂದು ಉತ್ತಮವಾದ ಹಾಗೂ ಗುಣಮಟ್ಟದ ಆಸ್ತಿಯನ್ನು ಮರು ನಿರ್ಮಾಣ ಮಾಡಿದ್ದೇವೆ.
– ಎಂ.ಎಲ್ ವೈಶಾಲಿ, ಜಿ.ಪಂ, ಸಿಇಓ
ಇದನ್ನು ಒದಿ : https://cnewstv.in/?p=9202
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments