Cnewstv.in / 05.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿಕಾರಿಪುರ : ತಾಲೂಕಿನ ಉಡುಗಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ 110ಗ್ರಾಮಗಳ 249ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸುಮಾರು 850ಕೋಟಿ ರೂ.ಗಳ ಏತ ನೀರಾವರಿ ಯೋಜನೆಯ ಭಾಗವಾಗಿ ಅಡಗಂಟಿ ಗ್ರಾಮದ ಸಮೀಪ ನಿರ್ಮಿಸಿರುವ ಏರುಕೊಳವೆ ಮಾರ್ಗ ತೊಟ್ಟಿಗೆ ನೀರು ಹರಿಸುವ ಯೋಜನೆಗೆ ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿ ಚಾಲನೆ ನೀಡಿದರು.
ಅವರು ಇಂದು ಶಿಕಾರಿಪುರ ತಾಲೂಕು ಅಡಗಂಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಸುಮಾರು 1500ಕೋಟಿ ರೂ.ಗಳ ಬೃಹತ್ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿತ್ತಿರುವುದು ಐತಿಹಾಸಿಕ ಕಾರ್ಯವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಾನುಷ್ಟಾನಗೊಳ್ಳಲಿದೆ ಎಂದರು.
ಈ ಯೋಜನೆಯ ಕರಾರುವಕ್ಕಾದ ಅನುಷ್ಠಾನದಿಂದಾಗಿ ವರ್ಷಪೂರ್ತಿ ಬಿಸಿಲು ಬರದಿಂದ ಕಂಗೆಟ್ಟಿದ್ದ ಈ ಪ್ರದೇಶದ ಜನರಲ್ಲಿ ಮಂದಹಾಸ ಮೂಡಿದೆ. ರೈತರು ಸ್ವಾಭಿಮಾನದಿಂದ ನೆಮ್ಮದಿಯ ಜೀವನ ನಡೆಸಲು, ಕೃಷಿ ಚಟುವಟಿಕೆ ನಡೆಸಲು, ಹಾಗೂ ಜನ-ಜಾನುವಾರುಗಳಿಗೆ ಶುದ್ದ ನೀರು ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಿದ ತಂತ್ರಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿನಂದನಾರ್ಹರು ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಉತ್ಪನ್ನಗಳಿಗೆ ನ್ಯಾಯೋಚಿತವಾದ ಬೆಲೆ ದೊರೆಯುವಂತಾಗಬೇಕು. ಆಗ ಸಹಜವಾಗಿ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದಾಗಿದೆ ಎಂದರು.
ಯೋಜನೆಯ ಆರಂಭದಲ್ಲಿ ಪ್ರಾಯೋಗಿಕವಾಗಿ ಭಾರಿ ಸಾಮರ್ಥ್ಯದ ಮೂರು ಯಂತ್ರಗಳಲ್ಲಿ ನೀರನ್ನು ಹರಿಸಲಾಗುತ್ತಿದೆ. ಈ ಯಂತ್ರಗಳ ಸಂಖ್ಯೆ 5ಕ್ಕೆ ಹೆಚ್ಚಿಸಿದಲ್ಲಿ ಇನ್ನು ಪ್ರಮಾಣದ ನೀರು ವೇಗವಾಗಿ ಹರಿದು ಬರಲಿದೆ. ಪ್ರಸ್ತುತ ಈ ಯೋಜನೆಯಡಿ 1.5TMC ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಳೇನಹಳ್ಳಿಯ ಶ್ರೀಗಳು ಮಾತನಾಡಿ, ಶಿಕಾರಿಪುರ ತಾಲೂಕಿನ ಸರ್ವಾಂಗೀಣ ವಿಕಾಸಕ್ಕಾಗಿ ಯಡಿಯೂರಪ್ಪನವರು ಹೊಂದಿದ್ದ ಅಮೂಲ್ಯ ಚಿಂತನೆಗಳು, ಕಂಡ ಕನಸುಗಳು ಹಾಗೂ ಅವರ ಸಂಕಲ್ಪ ಸಾಕಾರಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ರುದ್ರೇಗೌಡರು, ಶ್ರೀಮತಿ ಭಾರತಿಶೆಟ್ಟಿ, ಯು.ಬಿ.ಬಣಕಾರ್, ಕೆ.ಎಸ್.ಗುರುಮೂರ್ತಿ, ಎಸ್.ದತ್ತಾತ್ರಿ ಸೇರಿದಂತೆ ಹಲವು ಮಠಾಧಿಪತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=8858
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv