Breaking News

2008 Ahmedabad Serial Blast Case : ಸರಣಿ ಬಾಂಬ್‌ ಸ್ಫೋಟ ಪ್ರಕರಣ, 38 ಅಪರಾಧಿಗಳಿಗೆ ಮರಣದಂಡನೆ. 11 ಮಂದಿಗೆ ಜೀವಾವಧಿ ಶಿಕ್ಷೆ

Cnewstv.in / 18.02.2022 / ಅಹಮದಾಬಾದ್‌ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

2008 ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣ: 38 ಅಪರಾಧಿಗಳಿಗೆ ಮರಣದಂಡನೆ. 11 ಮಂದಿಗೆ ಜೀವಾವಧಿ ಶಿಕ್ಷೆ

ಅಹಮದಾಬಾದ್ : 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ವಿಶೇಷ ಕೋರ್ಟ್ ಮರಣದಂಡನೆ ವಿಧಿಸಲಾಗಿದೆ. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ನಿಯಮಗಳು ಮತ್ತು ಐಪಿಸಿ ಸೆಕ್ಷನ್ 302ರ ಅಡಿ ಈ ತೀರ್ಪು ಪ್ರಕಟಿಸಲಾಗಿದೆ.

ಸ್ಫೋಟದಲ್ಲಿ ಮೃತಪಟ್ಟ ಜನರಿಗೆ ತಲಾ 1 ಲಕ್ಷ ರೂ ಪರಿಹಾರ ನೀಡುವಂತೆ ವಿಶೇಷ ನ್ಯಾಯಾಧೀಶ ಎಆರ್ ಪಟೇಲ್ ಅವರು ತೀರ್ಪು ಪ್ರಕಟಿಸುವ ವೇಳೆ ಸೂಚನೆ ನೀಡಿದ್ದಾರೆ. ಗಂಭೀರ ಗಾಯಗೊಂಡವರಿಗೆ 50,000 ರೂ ಮತ್ತು ಅಲ್ಪಸ್ವಲ್ಪ ಗಾಯಗೊಂಡವರಿಗೆ 25,000 ರೂ ಪರಿಹಾರ ಸೂಚಿಸಲಾಗಿದೆ.

ಜುಲೈ 26, 2008 ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಸ್ಫೋಟಗಳಲ್ಲಿ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. 2002ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಜುಲೈ 26, 2008 ರಂದು ಅಹಮದಾಬಾದ್ ನಗರದಲ್ಲಿ ಸರಣಿ ಸ್ಫೋಟ ನಡೆದಿತ್ತು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಫೆಬ್ರವರಿ 8, 2022 ರಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.

2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಫೆಬ್ರವರಿ 8ರಂದು ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಇಸ್ಲಾಮಿಕ್ ಭಯೋತ್ಪಾದಕ ಗುಂಪು, ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಅಪರಾಧಿ ಮತ್ತು ಮರಣದಂಡನೆ ಶಿಕ್ಷೆಗೆ ಒಳಗಾದವರ ಪೈಕಿ ಉಸ್ಮಾನ್ ಅಗರಬತ್ತಿವಾಲಾನಿಗೆ ಹೆಚ್ಚುವರಿಯಾಗಿ ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಶಿಕ್ಷೆಗಾಗಿ ಒಂದು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿದೆ.

ಐಪಿಸಿ, ಯುಎಪಿಎ, ಸ್ಫೋಟಕ ಪದಾರ್ಥಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ತಡೆಯುವ ಕಾಯ್ದೆಗಳ ಅಡಿಯಲ್ಲಿ ಈ ಎಲ್ಲ 49 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ 48 ಅಪರಾಧಿಗಳಿಗೆ 2.85 ಲಕ್ಷ ರೂ ದಂಡ ವಿಧಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ ಶಿಕ್ಷೆಗೆ ಒಳಗಾದ ಉಸ್ಮಾನ್‌ಗೆ 2.88 ಲಕ್ಷ ರೂ ದಂಡ ವಿಧಿಸಲಾಗಿದೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಈ ಹಿಂದೆ 85 ಜನರನ್ನು ಬಂಧಿಸಿದ್ದರು. ಆದರೆ, 78 ಜನರ ವಿರುದ್ಧ ಮಾತ್ರ ವಿಚಾರಣೆ ಪ್ರಾರಂಭವಾಗಿತ್ತು. ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿತ್ತು.

ಇದನ್ನು ಒದಿ : https://cnewstv.in/?p=8525

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*