Breaking News

ಮಕ್ಕಳ ಮೇಲಿನ ದೌರ್ಜನ್ಯ : 6 ತಿಂಗಳಲ್ಲಿ ಗುರುತಿಸಲಾಗಿದ್ದು 24 ಪ್ರಕರಣಗಳು, 11 ಪ್ರಕರಣಗಳಿಗೆ ದೂರು.

Cnewstv.in / 24.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮಕ್ಕಳ ಮೇಲಿನ ದೌರ್ಜನ್ಯ : 6 ತಿಂಗಳಲ್ಲಿ ಗುರುತಿಸಲಾಗಿದ್ದು 24 ಪ್ರಕರಣಗಳು, 11 ಪ್ರಕರಣಗಳಿಗೆ ದೂರು.

ಶಿವಮೊಗ್ಗ : ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಮೇಲಾಗುವ ಯಾವುದೇ ದೌರ್ಜನ್ಯ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ ಆರು ತಿಂಗಳ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ನಡೆದ 24ಪ್ರಕರಣಗಳನ್ನು ಗುರುತಿಸಲಾಗಿದ್ದು, ಆ ಪೈಕಿ 11ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.

ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರಿಗೆ ಸೂಚಿಸಿದರು.

ಮಕ್ಕಳ ಮೇಲೆ ನಡೆಯುವ ಕ್ರೌರ್ಯ ಹಲ್ಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅವರಿಂದ ದೂರುಗಳನ್ನು ಸ್ವೀಕರಿಸಿ, ನೊಂದವರ ನೆರವಿಗೆ ಧಾವಿಸಲು ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಈ ಸಹಾಯವಾಣಿ ಸಾರ್ವಜನಿಕರು 1098ಕ್ಕೆ ಉಚಿತವಾಗಿ ಕರೆಮಾಡಿ ದೂರು ದಾಖಲಿಸಬಹುದಾಗಿದೆ. ಈ ವಿಷಯವನ್ನು ಜಿಲ್ಲೆಯಾದ್ಯಂತ ಬಿತ್ತಿ ಬರಹಗಳ ಮೂಲಕ ಪ್ರಚುರಪಡಿಸಲಾಗಿದೆ. ಅಗತ್ಯವಿರುವಲ್ಲಿ ಇನ್ನಷ್ಟು ಬಿತ್ತಿ ಬರಹಗಳನ್ನು ಬರೆಸಿ, ಪ್ರಚುರ ಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ನಿಲ್ದಾಣ ಮತ್ತು ಮಹಾನಗರಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೊಲೀಸ್, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ತರಬೇತಿಗಳನ್ನು ಆಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಸಂಬಂಧಿತ ಇನ್ನಷ್ಟು ವಿವಿಧ ಇಲಾಖೆಯ ಅಧಿಕಾರಿಗಳಿಗೂ ತರಬೇತಿ ನೀಡಿ, ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದವರು ಸಲಹೆ ನೀಡಿದರು.

ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು‌ ಅವರ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಾಮಾನ್ಯ ಹಾಗೂ ಗಂಭೀರ ಸ್ವರೂಪದ ವಿಷಯಗಳನ್ನು ಸ್ಥಳೀಯವಾಗಿ ಇರುವ ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಖುದ್ದು, ಅಥವಾ ಲಿಖಿತವಾಗಿ ತ್ವರಿತವಾಗಿ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಬಾಲ್ಯವಿವಾಹ, ಮಕ್ಕಳ ಮೇಲಿನ ಹಲ್ಲೆ ಮುಂತಾದ ಪ್ರಕರಣಗಳು ನಡೆದು, ಗಂಭೀರ ಸ್ವರೂಪ ಪಡೆದಲ್ಲಿ ಅಂತಹ ಕಾರ್ಯಕರ್ತರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಗರ್ಭಿಣಿ, ಬಾಣಂತಿ ಮತ್ತು ಅಭಿಜಾತ ಶಿಶುಗಳ ಕುರಿತು ಇಲಾಖೆಯ ಎಲ್ಲಾ ಹಂತದ ಅಧಿಕಾರಿ-ಸಿಬ್ಬಂಧಿಗಳು ಸದಾ ಮಾಹಿತಿ ಹೊಂದಿರಬೇಕು. ಅಗತ್ಯವಿದ್ದಲ್ಲಿ ಹಾಜರು ಪಡಿಸಲು ಸಿದ್ಧರಿರಬೇಕೆಂದವರು ಸೂಚಿಸಿದರು.

ಇದೇ ಸಂದರ್ಭದಲ್ಲಿ ಆಲ್ಕೊಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಕೀರ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಕಲ್ಯಾಣ ಸಮಿತಿ ಕಟ್ಟಡವು ಅತ್ಯಂತ ಚಿಕ್ಕದಾಗಿದ್ದು, ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗುತ್ತಿದ್ದು, ಪರ್ಯಾಯ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇದನ್ನು ಒದಿ : https://cnewstv.in/?p=7228

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*