Cnewstv.in / 18.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಕಾಲಿಕ ಮಳೆಗೆ ತತ್ತರಿಸಿದ ಮಲೆನಾಡು. ಕೃಷಿ ಇಲಾಖೆಯ ಆರಂಭಿಕ ಸಮೀಕ್ಷೆ ವರದಿ ಏನು ಗೊತ್ತಾ ?
ಶಿವಮೊಗ್ಗ : ಮಹಾಮಾರಿ ಕೊರೊನಾ ಸಂಕಷ್ಟದಿಂದ ನಮ್ಮ ರೈತರು ಈಗಾಗಲೇ ಸಾಕಷ್ಟು ತೊಂದರೆಗಳನ್ನು ಎದುರಿಸಿದರು, ಅಲ್ಲದೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು ಇದರ ಮಧ್ಯದಲ್ಲಿ ಮಳೆರಾಯ ನಮ್ಮ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದಾನೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 300ರಷ್ಟು ಅಧಿಕ ಮಳೆಯಾಗಿದೆ. ನವೆಂಬರ್ 1 ರಿಂದ 17 ರವರೆಗೆ ವಾಡಿಕೆಯಂತೆ ಮಲೆನಾಡು ಸುತ್ತಮುತ್ತ ಪ್ರದೇಶಗಳಲ್ಲಿ 25 ಮಿಲಿಮೀಟರ್ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಳೆದ 17 ದಿನಗಳಲ್ಲಿ 98 ಮಿಲಿಮೀಟರ್ ಮಳೆಯಾಗಿದೆ.
ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿದೆ. ಕಟಾವಿಗೆ ಬಂದಿರುವ ಭತ್ತ, ಮೆಕ್ಕೆಜೋಳ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಮುಂಗಾರು ಮಳೆಗೆ ಬೆಳೆದ ಬೆಳೆಯನ್ನು ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷಿ ಇಲಾಖೆಯ ಆರಂಭಿಕ ಸಮೀಕ್ಷೆ..
ಅಕಾಲಿಕ ಮಳೆಗೆ ಹಾನಿಯಾದ ಬಗ್ಗೆ ಕೃಷಿ ಇಲಾಖೆ ಸಮೀಕ್ಷೆಯನ್ನು ಆರಂಭಿಸಿದ್ದು, ಇಲಾಖೆಯ ಆರಂಭಿಕ ಸಮೀಕ್ಷೆಯ ಪ್ರಕಾರ 45 ಹೆಕ್ಟೇರ್ ಭತ್ತ, 9 ಹೆಕ್ಟೇರ್ ಮೆಕ್ಕೆಜೋಳ, 2 ಹೆಕ್ಟೇರ್ ನಷ್ಟು ರಾಗಿ ಬೆಳೆ ಹಾನಿಯಾಗಿದೆ ಎನ್ನಲಾಗಿದೆ. ಇದೇ ರೀತಿ ಮಳೆ ಏನಾದರೂ ಮುಂದುವರೆದರೆ ಜಿಲ್ಲೆಯಲ್ಲಿ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಹವಾಮಾನ ಇಲಾಖೆ ವರದಿಯ ಪ್ರಕಾರ ಇನ್ನೂ 4 ರಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ತತ್ತರಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ನಮ್ಮ ರೈತರ ಪರಿಸ್ಥಿತಿ.
ಇದನ್ನು ಒದಿ : https://cnewstv.in/?p=6832
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv