Breaking News

ಮಾದಕ ವಸ್ತುಗಳ ಸೇವನೆ ಒಂದು ಫ್ಯಾಷನ್ ಎಂಬಂತೆ ಬಿಂಬಿಸಿ, ಮಾದಕ ದ್ರವ್ಯಗಳನ್ನು ತುಂಬಾ ಆಕರ್ಷಕ ಪ್ಯಾಕೆಟ್‍ಗಳನ್ನು ಮಾಡಿ ಸೆಳೆಯಲಾಗುತ್ತಿದೆ.

Cnewstv.in / 17.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021

ಶಿವಮೊಗ್ಗ : ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಶಿಸ್ತು ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದಲ್ಲಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು. ‌

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021 ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಅಡಿಪಾಯ ತುಂಬ ಸದೃಢವಾಗಿರಬೇಕು. ಅವರಿಗೆ ಉತ್ತಮ ಸಾಮಾಜಿಕ ವಾತಾವರಣ, ಶಿಕ್ಷಣ, ಆರೋಗ್ಯ ಒದಗಿಸಬೇಕು. ಆಗ ಇಡೀ ಕುಟುಂಬ, ಸಮಾಜದ ಬೆಳವಣಿಗೆ ಸಾಧ್ಯ. ಹಾಗೂ ವಿದ್ಯಾರ್ಥಿಗಳು ಕೂಡ ಶಿಸ್ತು ಮತ್ತು ಪರಿಶ್ರಮದಿಂದ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.

ಮಾದಕ ವಸ್ತುಗಳ ಸೇವನೆ ಒಂದು ಫ್ಯಾಷನ್ ಎಂಬಂತೆ ಬಿಂಬಿಸಿ, ಮಾದಕ ದ್ರವ್ಯಗಳನ್ನು ತುಂಬಾ ಆಕರ್ಷಕ ಪ್ಯಾಕೆಟ್‍ಗಳನ್ನು ಮಾಡಿ ಮಕ್ಕಳನ್ನು, ಹದಿಹರೆಯದವರನ್ನು ಸೆಳೆಯಲಾಗುತ್ತಿದೆ. ಮಾದಕ ದ್ರವ್ಯದಂತಹ ಕೆಟ್ಟ ಅಭ್ಯಾಸಗಳೆಡೆ ಮಕ್ಕಳನ್ನು ಸೆಳೆಯಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದಲೇ ಸಿಗರೇಟ್ ಮತ್ತು ಮದ್ಯದ ಉತ್ಪನ್ನಗಳ ಮೇಲೆ ಅರಿವು ಮೂಡಿಸುವ ಚಿತ್ರ ಮತ್ತು ಬರಹಗಳನ್ನು ಮುದ್ರಿಸಲಾಗಿರುತ್ತದೆ.

ಶಾಲಾ ಹಂತದಲ್ಲಿಯೇ ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸುವುದು ಬಹು ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಬೀಡಿ, ಸಿಗರೇಟ್ ಇತರೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರ ದುಷ್ಪರಿಣಾಮ ತೀವ್ರವಾಗಿದ್ದು ಅದರಿಂದ ಹೊರಬರುವುದು ಕೂಡ ಅತ್ಯಂತ ಕಷ್ಟವಾಗಿರುತ್ತದೆ. ಹಾಗೂ ಈ ಮಾದಕ ವಸ್ತುಗಳನ್ನು ಕೊಳ್ಳಲು ಅವಶ್ಯಕವಾದ ಹಣಕ್ಕಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹ ಮಕ್ಕಳು ತೊಡಗುವ ಸಾಧ್ಯತೆ ಇದ್ದು ಇಂತಹ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಬೆಲೆ ಕೂಡ ಸಿಗುವುದಿಲ್ಲ. ಆದ್ದರಿಂದ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಅಧ್ಯಯನನಿರತರಾಗಿ ಉನ್ನತ ಮಟ್ಟದ ಹುದ್ದೆಗಳಿಗೇರಬೇಕು. ದಯಮಾಡಿ ಯಾವುದೇ ಮಕ್ಕಳು ಈ ದ್ರವ್ಯಗಳನ್ನು ಮುಟ್ಟಬಾರದು ಎಂದು ತಿಳಿ ಹೇಳಿದರು.

ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸಮಾಜದ ಬೆಳೆವಣಿಗೆ ವಿಷಯವನ್ನು ಆಧರಿಸಿ ರಚಿಸಿರುವ ಚಿತ್ರಕಲೆ ಮತ್ತು ಪ್ರಬಂಧಗಳು ಪ್ರಬುದ್ಧವಾಗಿವೆ. ದುಷ್ಪರಿಣಾಮ ಕುರಿತು ಅವರ ಯೋಚನಾ ಲಹರಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದು, ಮಕ್ಕಳ ಸೃಜನಾತ್ಮಕತೆ ಎಲ್ಲರೂ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ ಅವರು ಜಾಗೃತಿ ಅಭಿಯಾನ ನಡೆಸಿದ ಪೊಲೀಸ್ ಇಲಾಖೆ ಮತ್ತು ವಿವಿಧ ಜಾಗೃತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಇದನ್ನು ಒದಿ : https://cnewstv.in/?p=6812

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*