Breaking News

ಸಿನಿಮಾ ನಟಿ ಮೇಲೆ ಹಲ್ಲೆ ನಡೆಸಿದ ಮಾಜಿ ಪ್ರಿಯಕರ ಅರೆಸ್ಟ್

Cnewstv.in /27.10.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಸಿನಿಮಾ ಹಾಗೂ ಕಿರುತೆರೆ ನಟಿಯ ಮೇಲೆ ಮಾಜಿ ಪ್ರಿಯಕರ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಟಿ ಅನುಷಾ ಎಂಬುವವರ ಮೇಲೆ ಮಾಜಿ ಪ್ರಿಯಕರ ಚಂದನ್ ಪ್ರಸಾದ್ ಎಂಬುವವರು ಕಿರುಕುಳ ನೀಡಿದ್ದಲ್ಲದೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಅನುಷ ನೀಡಿರುವ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರದ
ಪೊಲೀಸರು ಚಂದನ್ ಪ್ರಸಾದ್ ನನ್ನ ಬಂಧಿಸಿದ್ದಾರೆ.

ನೆಲಮಂಗಲ ಮೂಲದ ಚಂದನ್‌ ಪ್ರಸಾದ್‌ 2015ರಲ್ಲಿ ಸೋಲದೇವನಹಳ್ಳಿಯಲ್ಲಿರುವ ಎಂಜಿನಿಯರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆಗ ಅದೇ ಕಾಲೇಜಿನ ಸಹಪಾಠಿ ತುಮಕೂರು ಮೂಲದ ಅನುಷಾ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆತನ ಹಿಂಸೆ ಮೇರೆಗೆ ಆಕೆಯೂ ಪ್ರೀತಿಸುತ್ತಿದ್ದರು.

ಎರಡು ತಿಂಗಳ ಬಳಿಕ ಆರೋಪಿ ವೈಯಕ್ತಿಕ ವಿಚಾರಕ್ಕೆ ಆಕೆ ಮೇಲೆ ಹಲ್ಲೆ ನಡೆಸಿದ್ದ. ಹೀಗಾಗಿ ಆಕೆ ಆತನಿಂದ ದೂರವಾಗಿದ್ದರು. ಆರೋಪಿ ಕೂಡ 2016ರಲ್ಲಿ ದುಬೈಗೆ ತೆರಳಿ ಸಾಫ್ಟ್ವೇರ್‌ ಎಂಜಿನಿಯರ್‌ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ವಾಪಸ್‌ ಬೆಂಗಳೂರಿಗೆ ಬಂದಿದ್ದಾನೆ. ನಂತರ ಮತ್ತೆ ಅನುಷಾ ಹಿಂದೆ ಬಿದ್ದಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಲ್ಲದೆ, ಬಾಗಲಗುಂಟೆಯಲ್ಲಿದ್ದ ಮನೆ ಬಳಿ ಬಂದು ಕಿರಿಕುಳ ನೀಡುತ್ತಿದ್ದ.

ಆತನ ಕಿರುಕುಳಕ್ಕೆ ಬೇಸತ್ತು ಇಡೀ ಕುಟುಂಬ ತುಮಕೂರಿಗೆ ಸ್ಥಳಾಂತರಗೊಂಡಿತ್ತು. ಅಲ್ಲಿಗೂ ಆತ ಬಂದು ದೌರ್ಜನ್ಯ ನಡೆಸುತ್ತಿದ್ದ ಎಂದು ಅನುಷಾ ದೂರಿನಲ್ಲಿ ಆರೋಪಿಸಿದ್ದಾರೆ.

ಅನಂತರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದ್ದರಿಂದ ನಾಗರಬಾವಿಯಲ್ಲಿ ವಾಸವಾಗಿದ್ದರು. ಈ ಮಾಹಿತಿ ಪಡೆದ ಆರೋಪಿ ಅಲ್ಲಿಗೂ ಬಂದು ತೊಂದರೆ ಕೊಡುತ್ತಿದ್ದು, ಫೋನ್‌ ಮಾಡಿ ಕಿರುಕುಳ ನೀಡುತ್ತಿದ್ದ. ಅ.19ರಂದು ನಸುಕಿನ 1 ಗಂಟೆ ಸುಮಾರಿಗೆ ಮನೆ ಬಳಿ ಬಂದು ಹೊರಗಡೆ ಬರುವಂತೆ ಫೋನ್‌ ಮಾಡಿದ್ದಾನೆ. ಆಗ ಆಕೆ ಹೆದರಿ ಸ್ನೇಹಿತೆ ಪ್ರಿಯಾಂಕ ಜತೆ ಅವರ ಮನೆಗೆ ಹೋಗಲು ಕ್ಯಾಬ್‌ ಕಾಯ್ದಿರಿಸಿ, ಕ್ಯಾಬ್‌ ಹತ್ತುತ್ತಿದ್ದಂತೆ ಕ್ಯಾಬ್‌ ತಡೆದ ಆರೋಪಿ ಅನುಷಾ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ.

ಅದನ್ನು ತಡೆಯಲು ಬಂದ ಸ್ನೇಹಿತೆ ಪ್ರಿಯಾಂಕ ಮತ್ತು ಕ್ಯಾಬ್‌ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಕ್ಯಾಬ್‌ ಚಾಲಕ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಅನುಷಾ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ನೆಲಮಂಗಲ ಮೂಲದ ಕಾಂಗ್ರೆಸ್‌ ಮುಖಂಡರೊಬ್ಬರ ಪುತ್ರ ಎಂದು ಹೇಳಲಾಗಿದೆ. ದುಬೈನಿಂದ ಬಂದ ಬಳಿಕ ತಂದೆಯ ರಿಯಲ್‌ ಎಸ್ಟೇಟ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ. ಇನ್ನು ಅನುಷಾ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನು ಒದಿ : https://cnewstv.in/?p=6611

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*