Cnewstv.in / 30.09.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಈ ಬಾರಿ ಶಿವಮೊಗ್ಗ ದಸರಾವನ್ನು ಕೋವಿಡ್ ಮುಂಜಾಗರೂಕತೆಯೊಂದಿಗೆ ಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಆಚರಣೆ ಕುರಿತು ಮಹಾನಗರ ಪಾಲಿಕೆ ಸದಸ್ಯರ ಮತ್ತು ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮೈಸೂರು ದಸರಾ ಮಾದರಿಯಲ್ಲಿ ಹಲವು ವರ್ಷಗಳಿಂದ ದಸರಾವನ್ನು ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಸರಳವಾಗಿ ದಸರಾ ಆಚರಿಸಲಾಗಿದ್ದು, ಈ ಬಾರಿ ಹೆಚ್ಚಿನ ಜನ ಸೇರದಂತೆ ಎಲ್ಲಾ ಮುಂಜಾಗರೂಕತೆಗಳೊಂದಿಗೆ ವಿಜೃಂಭಣೆಯಿAದ ಆಚರಿಸಲು ಸಿದ್ಧತೆಗಳನ್ನು ಮಾಡಲಾಗಿದೆ.
9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಹಿಂದೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿದಿನ ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ವಿಜಯದಶಮಿಯ ಕಡೆ ದಿನದ ಮೆರವಣಿಗೆಯನ್ನು ಸರಳವಾಗಿ, ವ್ಯವಸ್ಥಿತವಾಗಿ ನಡೆಸಲಾಗುವುದು. ಪ್ರತಿ ವರ್ಷ ನೀಡುವಂತೆ 196 ದೇವಾಲಯಗಳಿಗೆ ಪೂಜೆ ಆಲಂಕಾರಕ್ಕಾಗಿ 4ಸಾವಿರ ರೂ. ಅನುದಾನ ಒದಗಿಸಲಾಗುವುದು. ಆದರೆ ಮೆರವಣಿಗೆಯಲ್ಲಿ ಎಲ್ಲಾ ದೇವಾಲಯಗಳು ಭಾಗವಹಿಸುವ ಅಗತ್ಯವಿಲ್ಲ. ಆಯ್ದ ಕೆಲವು ದೇವಾಲಯಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ. ದಸರಾ ಆಚರಣೆಗೆ ರಾಜ್ಯ ಸರ್ಕಾರದಿಂದ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.
ಎಲ್‌ಇಡಿ ಪರದೆ ಅಳವಡಿಕೆ
ದಸರಾದ ವೈಭವವನ್ನು ಸಾರ್ವಜನಿಕರು ವೀಕ್ಷಿಸಲು ಸಹಾಯಕವಾಗುವಂತೆ ನಗರದ ವಿವಿಧೆಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಈ ಪರದೆಗಳ ಮೂಲಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಸಹಕರಿಸುವ ಮೂಲಕ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಇದನ್ನು ಓದಿ : https://cnewstv.in/?p=6284
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv