Cnewstv.in / Shivamogga / 18.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಹಳ್ಳಿ ಹಳ್ಳಿಯಲ್ಲೂ ಸೋಂಕು ಹರಡವುದನ್ನು ತಡೆಯಲು ಗ್ರಾಮಸ್ಥರೆ ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ತಾಲೂಕಿನ ಹಳ್ಳಿಯೊಂದು ಕೋವಿಡ್ ಸೋಂಕು ವ್ಯಾಪಕಗೊಳ್ಳುವುದನ್ನು ತಡೆಯಲು ಸ್ವಯಂ ಲಾಕ್ ಡೌನ್ ವಿಧಿಸಿಕೊಂಡಿದೆ. ಗ್ರಾಮದಲ್ಲಿ 40ಕ್ಕೂ ಹೆಚ್ಚು ಮಂದಿಯಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಊರಿನ ಪ್ರಮುಖರೊಬ್ಬರು ಕೋವಿಡ್‍ಗೆ ತುತ್ತಾಗಿ ಮೃತರಾಗಿದ್ದಾರೆ. ಆ ಬಳಿಕ ಗ್ರಾಮಸ್ಥರು ಸಭೆ ಸೇರಿ, ಒಂದು ವಾಹನ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ಹಾರನಹಳ್ಳಿ ಹೋಬಳಿಯ ನಾರಾಯಣಪುರ ಗ್ರಾಮದಲ್ಲಿ ಸ್ವಯಂ ಲಾಕ್ ಡೌನ್ ವಿಧಿಸಿಕೊಳ್ಳಲಾಗಿದೆ. ನಾರಾಯಣಪುರದಲ್ಲಿ ಸುಮಾರು 350 ಮನೆಗಳಿವೆ. ಒಂದೂವರೆ ಸಾವಿರದಷ್ಟು ಜನಸಂಖ್ಯೆ ಇದೆ. ಸದ್ಯ 40 ರಿಂದ 45 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸುಮಾರು ಹತ್ತು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾಗೆ ತುತ್ತಾಗಿದ್ದ ಗ್ರಾಮದ ಪ್ರಮುಖರಾದ ಹೇಮ್ಲಾನಾಯ್ಕ ಆವರು ಮೃತರಾಗಿದ್ದಾರೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದೆ ಕಾರಣಕ್ಕೆ ಸಭೆ ಸೇರಿ ಸ್ವಯಂ ಲಾಕ್ ಡೌನ್‍ಗೆ ಒಳಗಾಗಿದ್ದಾರೆ.
ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಅವಧಿ ಮೀರಿ ಮನೆಯಿಂದ ಹೊರ ಬಂದರೆ ಎರಡು ಸಾವಿರ ರೂ. ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಬೆಳಗ್ಗೆ ಒಂಭತ್ತು ಗಂಟೆ ಬಳಿಕವು ಅಂಗಡಿ ತೆಗೆದಿದ್ದರೆ ಮಾಲೀಕರಿಗೆ ಹತ್ತು ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.ಜನರು ಹೊರಗೆ ಓಡಾಡದಂತೆ ತಡೆಯಲು ಮತ್ತು ಪರ ಊರಿನ ಜನರು ನಾರಾಯಣಪುರದೊಳಗೆ ಬಾರದಂತೆ ನೋಡಿಕೊಳ್ಳಲು ಕೆಲವು ಯುವಕರಿಗೆ ಜವಾಬ್ದಾರಿ ನೀಡಲಾಗಿದೆ.
ಸ್ವಯಂ ಲಾಕ್ ಡೌನ್ ವಿಧಿಸಿಕೊಂಡು ನಾರಾಯಣಪುರ ಗ್ರಾಮದವರು ಇತರರಿಗೆ ಮಾದರಿಯಾಗಿದೆ. ಗ್ರಾಮಗಳ ಹಂತದಲ್ಲಿ ಈ ಮಾದರಿ ಅನುಸರಿಸಿದರೆ ಜಿಲ್ಲೆಯಲ್ಲಿ ಸೋಂಕು ತಡೆಗೆ ಅನುಕೂಲವಾಗಲಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv