Breaking News

ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಜಾರಿ : ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಲು ಮಾತ್ರ ಅವಕಾಶ

 

Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ನಾಳೆಯಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಜಾರಿಯಾಗಲಿದ್ದು, ಜನರು ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ನಡೆದುಕೊಂಡು ಹೋಗಿ ಖರೀದಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಆಸ್ಪತ್ರೆಗೆ ತೆರಳುವಂತಹ ಅಗತ್ಯ ಸಂದರ್ಭದಲ್ಲಿ ಮಾತ್ರ ವಾಹನ ಬಳಸಬಹುದಾಗಿದೆ. ಮೆಡಿಕಲ್‍ಗಳಿಗೆ ಸ್ಥಳೀಯವಾಗಿ ನಡೆದುಕೊಂಡೇ ಹೋಗಬೇಕು. ಇತರ ಕಾರಣಗಳಿಗೆ ರಸ್ತೆಗೆ ಬರುವ ವಾಹನವನ್ನು ಲಾಕ್‍ಡೌನ್ ಮುಗಿಯುವ ತನಕ ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಸ್ಥಳೀಯವಾಗಿ ಗುರುತಿಸಲಾಗಿರುವ ಝೋನ್ ವ್ಯಾಪ್ತಿಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಪ್ರತಿ ಝೋನ್‍ನಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ ಸಂಚಾರ ನಿರ್ಬಂಧಿಸಲಾಗುವುದು. ಲಾಕ್‍ಡೌನ್ ಬಿಗಿಯಾಗಿ ಜಾರಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಗರದ ಎಲ್ಲಾ ವಾರ್ಡ್‍ಗಳಲ್ಲಿ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಲು ಹಾಪ್‍ಕಾಮ್ಸ್‍ಗೆ 70 ವಾಹನಗಳನ್ನು ಒದಗಿಸಲಾಗಿದೆ. ಈ ವಾಹನ ಎಲ್ಲಾ ವಾರ್ಡ್‍ಗಳಲ್ಲಿ ಬೆಳಿಗ್ಗೆ 6ರಿಂದ 12ರವರೆಗೆ ವಾಹನ ಸಂಚರಿಸಿ ಮಾರಾಟ ಮಾಡಲಿದೆ. ಎಪಿಎಂಸಿಯಲ್ಲಿ ಸಗಟು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಎಪಿಎಂಸಿ ಹೊರಗೆ ಪ್ರಸ್ತುತ ನಡೆಯುತ್ತಿರುವ ಚಿಲ್ಲರೆ ಮಾರಾಟವನ್ನು ನಿಷೇಧಿಸಲಾಗಿದೆ. ತಳ್ಳುಗಾಡಿ ಮಾರಾಟಕ್ಕೆ ಸಹ ಬೆಳಿಗ್ಗೆ 6ರಿಂದ 12ರವರೆಗೆ ಅವಕಾಶ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ವಾರದಲ್ಲಿ ಎರಡು ದಿನ ವಾಹನಗಳ ಮೂಲಕ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಸಚಿವರು, ಮೆಗ್ಗಾನ್ ಆಸ್ಪತ್ರೆಯ ಒಳಗೆ ಕೋವಿಡ್ ರೋಗಿಗಳ ಬಳಿಗೆ ಅವರ ಸಂಬಂಧಿಕರು ತೆರಳಲು ಅವಕಾಶ ನೀಡಬಾರದು. ಬೆಳಿಗ್ಗೆ ವಾಕಿಂಗ್ ಹೋಗಲು ಅನುಮತಿ ಇರುವುದಿಲ್ಲ. ಎಲ್ಲಾ ಉದ್ಯಾನವನ, ಸ್ಟೇಡಿಯಂ ಕಟ್ಟುನಿಟ್ಟಿನಿಂದ ಮುಚ್ಚಬೇಕು. ಮದುವೆಗೆ ಒಟ್ಟು 40ಮಂದಿಗೆ ಮಾತ್ರ ಅವಕಾಶವಿದ್ದು, ಅಗತ್ಯ ಪಾಸುಗಳನ್ನು ತಹಶೀಲ್ದಾರ್ ಕಚೇರಿಯಿಂದ ಪಡೆಯಬೇಕು. ಗಡಿಭಾಗದಲ್ಲಿರುವ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಕಾರ್ಮಿಕರನ್ನು ಸಣ್ಣ ಗುಂಪುಗಳಲ್ಲಿ ವಿಂಗಡಿಸಿ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕಾಮಗಾರಿ ಅನುಷ್ಟಾನಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಆಯನೂರು ಮಂಜುನಾಥ್, ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*