ಶಿವಮೊಗ್ಗ:
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೇ ಮಾರ್ಗಕ್ಕಾಗಿ ರೈತರಿಂದ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಭೂಮಿ ಕಳೆದುಕೊಳ್ಳುವ ರೈತ ಹೋರಾಟ ಸಮಿತಿ ಒತ್ತಾಯಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಬಿ.ಜಿ. ರೈಲು ಮಾರ್ಗಕ್ಕೆ ಭೂಮಿ ಕಳೆದು ಕೊಳ್ಳುವ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಹೊಸ ಬಿ.ಜಿ. ರೈಲ್ವೇ ಮಾರ್ಗಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಕಟಣೆ ಹೊರಡಿಸಿದ್ದು, ಕೆಐಎಡಿಬಿ ಮೂಲಕ 1 ಎಕರೆಗೆ 6 ಲಕ್ಷದಿಂದ 14 ಲಕ್ಷ ಪರಿಹಾರ ಹಣ ಕೊಡುವುದಾಗಿ ಹೇಳುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರ್ಯಾಯವಾಗಿ ಒಂದು ಎಕರೆಗೆ 1 ಕೋಟಿ 25 ಲಕ್ಷ ಹಾಗೂ ಅಡಿಕೆ ತೋಟಕ್ಕೆ 2.5 ಕೋಟಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು ಮತ್ತು ನಿರಾಶ್ರಿತ ರೈತ ಕುಟುಂಬಕ್ಕೆ ಉದ್ಯೋಗದ ಜೊತೆಗೆ ಸರ್ಕಾರಿ ಜಮೀನು ಮತ್ತು ಬಗರ್ ಹುಕುಂ, ಮತ್ತು ಗ್ರಾಮ ಠಾಣಾಗಳಿಗೆ ಸೂಕ್ತವಾದ ಜಮೀನನ್ನು ನಿಗಧಿ ಪಡಿಸಬೇಕು ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದ್ದಾರೆ.