ಶಿವಮೊಗ್ಗ : ಕಾನು ಅರಣ್ಯ ಸಂರಕ್ಷಣಾ ಯೋಜನೆ ಜಾರಿಗೊಳಿಸಿದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಸುಮಾರು 40ಸಾವಿರ ಎಕ್ರೆ ಕಾನು ಅರಣ್ಯ ಪ್ರದೇಶ ಸಂರಕ್ಷಣೆ ಸಾಧ್ಯವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 2ಲಕ್ಷ ಎಕ್ರೆಯಷ್ಟಿದ್ದ ಕಾನು ಅರಣ್ಯ ಪ್ರದೇಶ ಇದೀಗ 1.40ಲಕ್ಷ ಎಕ್ರೆಗೆ ಇಳಿದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ 70ಲಕ್ಷ ಕಾನು ಅರಣ್ಯ ಪ್ರದೇಶ ಸಂರಕ್ಷಿಸುವ ಗುರಿಯನ್ನು ಹೊಂದಲಾಗಿದ್ದು, ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಶಿಫಾರಸ್ಸು: ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕಂದಾಯ ಅರಣ್ಯಭೂಮಿ (ಡೀಮ್ಡ್ ಅರಣ್ಯ)ವಿದ್ದು, ಇದರಲ್ಲಿ ಬಹುತೇಕ ಕಾನು ಅರಣ್ಯವಾಗಿದೆ. ಪ್ರತಿ ಗ್ರಾಮದ ಕಾನು ಅರಣ್ಯಗಳನ್ನು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಜಿಪಿಎಸ್ ಮೂಲಕ ಗಡಿ ಗುರುತಿಸಿ ನಕ್ಷೆ ರಚಿಸಬೇಕು. ಜಲಾನಯನ ಅಭಿವೃದ್ಧಿ ಯೋಜನೆಗಳಲ್ಲಿ ಕಾನು ಅರಣ್ಯ ಸಂರಕ್ಷಣೆಯನ್ನೂ ಸೇರಿಸಬೇಕು. ಈ ವ್ಯಾಪ್ತಿಯಲ್ಲಿ ಕಿರು ಅರಣ್ಯ ಉತ್ಪತ್ತಿ ಸಂಗ್ರಹಕ್ಕೆ ಕಡಿವಾಣ ಹಾಕಬೇಕು ಇತ್ಯಾದಿ ಶಿಫಾರಸುಗಳನ್ನು ವರದಿಯಲ್ಲಿ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಕಾನು ಅರಣ್ಯವನ್ನು ಯಾವುದೇ ಉದ್ದೇಶಕ್ಕೆ ಮಂಜೂರು ಮಾಡಲಾಗುತ್ತಿಲ್ಲ. ಈ ಕುರಿತಾದ 43ಪ್ರಕರಣಗಳನ್ನು ಜಿಲ್ಲಾಮಟ್ಟದ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದ್ದು, ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅನಧಿಕೃತವಾಗಿ ಮಂಜೂರು ಮಾಡಲಾಗಿರುವ ಕಂದಾಯ ಅರಣ್ಯ ಭೂಮಿಯನ್ನು ಮರುಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಾಗರ ವಿಭಾಗ ಡಿಎಫ್‍ಒ ಮೋಹನ್ ಕುಮಾರ್ ಅವರು ಮಾತನಾಡಿ, ಸಾಗರ ವಿಭಾಗದಲ್ಲಿ 210ಕಾನು ಪ್ರದೇಶ ವ್ಯಾಪ್ತಿಯಲ್ಲಿ 370ಕಿಮೀ ಕಂದಕ ತೋಡಿ ಗಡಿಯನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ 62ಕಾನು ಪ್ರದೇಶದ 124ಕಿ.ಮೀ ವ್ಯಾಪ್ತಿಯಲ್ಲಿ ಕಂದಕ ತೋಡಿ ನಾಮಫಲಕ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
Recent Comments