ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಲಾಂಚ್ ನಡುನೀರಿನ ಮಧ್ಯೆ ಸಿಲುಕಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕೊನೆಗೂ ಲಾಂಚ್ ಸೇಫಾಗಿ ದಡ ಸೇರಿದ್ದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹಸಿರುಮಕ್ಕಿ ಲಾಂಚ್ ಹೊಸನಗರ ತಾಲೂಕು ಕೆ.ಬಿ.ಕ್ರಾಸ್ ನ ಕಡೆಯಿಂದ ಸಾಗರ ತಾಲೂಕಿನ ಹುಲಿದೇವರ ಬನದ ಕಡೆಗೆ ಹಿನ್ನೀರಿನಲ್ಲಿ ಪ್ರಯಾಣ ಆರಂಭಿಸಿತ್ತು. ಆದರೆ ಇದೇ ವೇಳೆಗೆ ಬಾರಿ ಗಾಳಿ ಆರಂಭಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಲಾಂಚ್ ನಡುನೀರಿನಲ್ಲೇ ಸಿಲುಕಿಕೊಂಡಿದೆ. ಗಾಳಿಯ ರಭಸ ಹೆಚ್ಚಾದಂತೆ ಲಾಂಚ್ ಇನ್ನೊಂದೆಡೆಗೆ ತೆರಳಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಮಾಡಿರುವ ಪಿಲ್ಲರ್ ಗೆ ಸಿಕ್ಕಿಕೊಂಡಿದೆ. ಆಗ ದಡದಲ್ಲಿದ್ದವರು ತೆಪ್ಪದಲ್ಲಿ ತೆರಳಿ ಲಾಂಚ್ ಗೆ ಹಗ್ಗ ಕಟ್ಟಿ ಸಮೀಪದಲ್ಲೇ ಇದ್ದ ಪಿಲ್ಲರ್ ಗೆ ಕಟ್ಟಿ ಲಾಂಚ್ ಬೇರೆಡೆಗೆ ಹೋಗದಂತೆ ಮುಂಜಾಗ್ರತೆ ವಹಿಸಿದ್ದಾರೆ. ಬಳಿಕ ಕ್ರೇನ್ ನವರಿಗೆ ಮಾಹಿತಿ ನೀಡಿ ಲಾಂಚನ್ನು ದಡಕ್ಕೆ ಎಳೆಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಗಾಳಿಯ ರಭಸ ಕಡಿಮೆಯಾಗಿದ್ದರಿಂದ ಲಾಂಚ್ ಚಾಲಕ ನಿಧಾನವಾಗಿ ಲಾಂಚನ್ನು ಹುಲಿದೇವರ ಬನ ಭಾಗದ ದಡಕ್ಕೆ ತಂದಿದ್ದಾರೆ. ಅಲ್ಲಿಯವರೆಗೂ ಆತಂಕದಲ್ಲಿದ್ದ ಲಾಂಚ್‌ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಲಾಂಚ್ ದಡ ಸೇರುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.
C News TV Kannada News Online in cnewstv