Breaking News

ಜುಲೈ ಅಂತ್ಯದ ವೇಳೆಗೆ ಕುವೆಂಪು ವಿವಿ ಘಟಿಕೋತ್ಸವ

 

ಶಂಕರಘಟ್ಟ :  ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ನಡೆಸಲು ರಾಜ್ಯಪಾಲರು ಸಮ್ಮತಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿಸಿದಲ್ಲಿ ಬರುವ ಜುಲೈ 28 ಅಥವಾ 29ರಂದು ಆಂತರಿಕವಾಗಿ ಘಟಿಕೋತ್ಸವವನ್ನು ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ತಿಳಿಸಿದ್ದಾರೆ. ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವ, ಈಗಾಗಲೇ ಕೋವಿಡ್-19ರ ಕಾರಣದಿಂದ ವಿಳಂಬವಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಸಲ್ಲಿಸಿದ ಮನವಿಗೆ ಸ್ಪಂದಿಸಿದ ರಾಜ್ಯಪಾಲ ವಜ್ಜುಭಾಯಿ ವಾಲಾ ಅವರು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಘಟಿಕೋತ್ಸವ ಆಯೋಜಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದ ವೇಳೆಗೆ ಘಟಿಕೋತ್ಸವ ಆಯೋಜಿಸಲು ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಆಂತರಿಕ ಘಟಿಕೋತ್ಸವ: ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅನುಮತಿಸಿದಲ್ಲಿ ಈ ಬಾರಿಯ ಘಟಿಕೋತ್ಸವವನ್ನು ಇನ್ ಹೌಸ್ ಮಾದರಿಯಲ್ಲಿ (ಆಂತರಿಕವಾಗಿ) ಆಯೋಜಿಸಲಾಗುವುದು. ಸುಮಾರು ಒಂದು ಸಾವಿರ ಸಭಿಕರು ಭಾಗವಹಿಸಬಹುದಾದ ವಿಶ್ವವಿದ್ಯಾಲಯದ ಹೊಸ ಘಟಿಕೋತ್ಸವ ಸಭಾಂಗಣದಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಘಟಿಕೋತ್ಸವವನ್ನು ನಡೆಸಲಾಗುವುದು. ರ್ಯಾಂಕ್ ವಿಜೇತರು, ಪಿಎಚ್‍ಡಿ ಪದವೀಧರರು, ಗೌರವ ಡಾಕ್ಟರೇಟ್ ಪಡೆದವರು, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಒಳಗೊಂಡಂತೆ ಸುಮಾರು 500 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

ಜೇಷ್ಠತಾ ಪಟ್ಟಿಗೆ ಅನುಮೋದನೆ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುವೆಂಪು ವಿಶ್ವವಿದ್ಯಾಲ ಯದ ಅಧ್ಯಾಪಕೇತರ ನೌಕರರ ಜೇಷ್ಠತೆಗೆ ಸಂಬಂಧಿಸಿದಂತೆ, ಜನವರಿ 20, 2020ರಂದು ಅಂತರ್ಜಾಲದಲ್ಲಿ ಪ್ರಕಟಿಸಿದ ಜೇಷ್ಠತಾ ಪಟ್ಟಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ಇದಕ್ಕೆ ಸಂಬಂಧಿಸಿದ ಬಡ್ತಿ ಮತ್ತ ವೇತನ ಸವಲತ್ತುಗಳನ್ನು ಸಹ ಅತಿ ಜರೂರೆಂದು ಪರಿಗಣಿಸಿ ಕೂಡಲೇ ಅರ್ಹ ಸಿಬ್ಬಂದಿಗೆ ಒದಗಿಸಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಕುಲಸಚಿವ ಪ್ರೊ. ಎಸ್ ಎಸ್ ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ವೆಂಕಟೇಶ್ವರಲು, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ಎಚ್ ಬಿ ರಮೇಶ್ ಬಾಬು, ರಾಮಲಿಂಗಪ್ಪ, ಎಸ್. ಆರ್. ನಾಗರಾಜ್, ಕಿರಣ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

*