ಶಿವಮೊಗ್ಗ : ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲಾ ಚರಂಡಿಗಳ ಹೂಳು ತೆಗೆಯುವುದು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಗಾಲದ ಪೂರ್ವಸಿದ್ಧತೆ ಪರೀಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಸೂಚನೆಗಳನ್ನು ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಚರಂಡಿ ತುಂಬಿ ಯಾವುದೇ ಕಾರಣಕ್ಕೂ ನೀರು ಹೊರಗೆ ಹರಿಯುವ ಪರಿಸ್ಥಿತಿ ಎಲ್ಲಿಯೂ ಕಾಣಿಸಬಾರದು. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಮಳೆಗಾಲದಲ್ಲಿ ಪ್ರವಾಹ ಸಾಧ್ಯತೆಯಿರುವ ಗ್ರಾಮಗಳನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಗ್ರಾಮಗಳ ಸಂಖ್ಯೆಗೆ ಅನುಗುಣವಾಗಿ ಪರಿಹಾರ ಕೇಂದ್ರಗಳಿಗೆ ಈಗಲೇ ಸ್ಥಳವನ್ನು ಗುರುತಿಸಿ ನೋಡಲ್ ಅಧಿಕಾರಿಯನ್ನು ಸಹ ನಿಯೋಜಿಸಬೇಕು. ಮಳೆಯಿಂದ ಕೆರೆ ಕಟ್ಟೆ, ನಾಲೆಗಳು ತುಂಬಿ ಅನಾಹುತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಬೇಕು. ಈ ಹಿಂದಿನ ಮಳೆಗಾಲದ ಅವಧಿಯಲ್ಲಿ ಒಡೆದು ಹೋಗಿ ದುರಸ್ತಿ ಮಾಡಲಾಗಿರುವ ಕೆರೆ ಕಟ್ಟೆಗಳನ್ನು ಈಗಲೇ ಪರಿಶೀಲನೆ ನಡೆಸಬೇಕು. ತುಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಅವಕಾಶ ನೀಡಬಾರದು. ನೀರಿನ ಒಳ ಹರಿವಿನ ಮೇಲೆ ನಿರಂತರ ನಿಗಾ ಇರಿಸಿ, ಜಲಾಶಯದಿಂದ ನೀರು ಬಿಡುವ ಕುರಿತು ನಿರಂತರ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಮತ್ತಿತರ ಸಾಮಾಗ್ರಿಗಳು ದಾಸ್ತಾನಿರಿಸಬೇಕು ಎಂದು ಹೇಳಿದರು.
Recent Comments