Breaking News

ಮೇ27ರಂದು ಹೃದ್ರೋಗ ವಿಭಾಗದ OPD ಆರಂಭ: ಸಚಿವ ಕೆ.ಎಸ್.ಈಶ್ವರಪ್ಪ

 

ಶಿವಮೊಗ್ಗ : ಶಿವಮೊಗ್ಗ ಮೆಡಿಕಲ್ ಕಾಲೇಜಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27ರಂದು ಹೃದ್ರೋಗ ವಿಭಾಗದ ಹೊರ ರೋಗಿ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಒಪಿಡಿಯಲ್ಲಿ ಪ್ರತಿ ದಿನ 80ರಿಂದ 100 ಮಂದಿ ಹೃದಯ ಸಂಬಂಧಿ ಖಾಯಿಲೆ ಇರುವ ರೋಗಿಗಳಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಹೃದ್ರೋಗ ತಜ್ಞರಾದ ಡಾ.ಪರಮೇಶ್ವರ ಎಸ್ ಮತ್ತು ಡಾ.ಮಹೇಶಮೂರ್ತಿ ಅವರು ಇಲ್ಲಿ ಕಾರ್ಯನಿರ್ವಹಿಸುವರು ಎಂದು ಹೇಳಿದರು.

ಕಾರ್ಡಿಯಾಕ್ ಕ್ಯಾಥ್‍ಲ್ಯಾಬ್ ಆರಂಭಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅಂತಿಮಗೊಳಿಸಲಾಗಿದೆ. ತಕ್ಷಣ ಸದರಿ ಕಂಪೆನಿಗೆ ಕಾರ್ಯಾದೇಶ ನೀಡಿ ಕ್ಯಾಥ್‍ಲ್ಯಾಬ್ ಪೂರ್ಣಗೊಳಿಸಲು ಸೂಚಿಸಲು ನಿರ್ಧರಿಸಲಾಗಿದೆ. ಆ ಬಳಿಕ ಹೃದಯಕ್ಕೆ ಸಂಬಂಧಿಸಿದ ಹೆಚ್ಚಿನ ಚಿಕಿತ್ಸೆಗಳಾದ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಹೃದಯನಾಳಕ್ಕೆ ಸ್ಟಂಟ್ ಅಳವಡಿಕೆ, ಹೃದಯ ಕವಾಟಗಳ ಚಿಕಿತ್ಸೆ ಮತ್ತು ಹುಟ್ಟಿದಾಗಿನಿಂದ ಬಂದಂತಹ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.

ಇದೇ ರೀತಿ ನರರೋಗ ವಿಭಾಗದಲ್ಲಿ ನರರೋಗ ತಜ್ಞರಾದ ಡಾ.ಕುಮಾರ್ ಸ್ಟ್ರೋಕ್, ಎಪಿಲೆಪ್ಸಿ, ನ್ಯೂರೋಪಥಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡುವರು. ನರರೋಗಿಗಳಿಗೆ ಬೇಕಾದ ಇಎನ್‍ಎಂಜಿ, ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಗಳು ಇಲ್ಲಿಯೇ ದೊರೆಯಲಿವೆ ಎಂದು ಸಚಿವರು ಹೇಳಿದರು.

ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ ನಾಯ್ಕ, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಗ್ಗಾನ್ ನಿರ್ದೇಶಕ ಡಾ.ಗುರುಪಾದಪ್ಪ, ಮೆಗ್ಗಾನ್ ಆಡಳಿತ ಸಮಿತಿ ಸದಸ್ಯರಾದ ದಿನಾಕರ ಶೆಟ್ಟಿ, ಡಾ.ಗೌತಮ್, ಡಾ.ವಾಣಿ ಕೋರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*