ಶಿವಮೊಗ್ಗ : ಜಿಲ್ಲೆಯಲ್ಲಿ ಇನ್ಮುಂದೆ ಮಾಸ್ಕ್ ಇಲ್ಲದೆ ಓಡಾಡುವಂತಿಲ್ಲ ಜೊತೆಗೆ ಎಲ್ಲೆಂದರಲ್ಲಿ ಉಗುಳುವಂತೆಯೂ ಇಲ್ಲ. ಒಂದು ವೇಳೆ ಮಾಸ್ಕ ಇಲ್ಲದಿದ್ದರೆ ಹಾಗೂ ಎಲ್ಲೆಂದರಲ್ಲಿ ಉಗುಳಿದರೆ ದಂಡ ಕಟ್ಟುವುದು ಅನಿವಾರ್ಯ. ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತ ಆರಂಭದಿಂದಲೂ ಹಲವು ವಿನೂತನ ಕ್ರಮಕೈಗೊಂಡು ಯಶಸ್ವಿಯಾಗಿದೆ. ಇದೀಗ ಅದೇ ರೀತಿ ಅನಗತ್ಯವಾಗಿ ಮನೆಯಿಂದ ಹೊರಗೆಬರುವವರಿಗೆ ಬಿಸಿಮುಟ್ಟಿಸಲು ಜಿಲ್ಲಾಡಳಿತ ಮುಂದಾಗಿದೆ. ಮನೆಯಿಂದ ಹೊರಬರುವಾಗ ಮಾಸ್ಕ್ ಧರಿಸದೇ ಇದ್ದವರಿಗೆ ಮೊದಲನೆ ಬಾರಿ ನೂರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಎರಡನೆ ಬಾರಿಯೂ ಮಾಸ್ಕ್ ಧರಿಸದೇ ಇದ್ದಲ್ಲಿ ಇನ್ನೂರು ರೂಪಾಯಿ ದಂಡ ವಿಧಿಸಲಾಗುತ್ತದೆ. ಇದಲ್ಲದೆ ಎಲ್ಲೆಂದರಲ್ಲಿ ಉಗುಳುವಂತೆಯೂ ಇಲ್ಲ ಉಗುಳಿದರೆ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.ಇಷ್ಟಕ್ಕೆ ಬುದ್ದಿ ಕಲಿಯದೆ ಎರಡನೆ ಬಾರಿಯೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಬರೋಬ್ಬರಿ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ತಂಬಾಕು ಉತ್ಪನ್ನ ಹಾಗೂ ಮದ್ಯ ಮಾರಾಟ ಮಾಡಿದಲ್ಲಿ ಮೊದಲ ಬಾರಿಗೆ 500 ರೂಪಾಯಿ ಹಾಗೂ ಎರಡನೆ ಬಾರಿಗೆ ಇದೇ ತಪ್ಪು ಮಾಡಿದಲ್ಲಿ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶ ಹೊರಡಿಸಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಆದೇಶ ಉಲ್ಲಂಘಿಸಿದ ಜನರಿಗೆ ದಂಡದ ಬಿಸಿ ಮುಟ್ಟಿಸಲಾರಂಭಿಸಿದ್ದಾರೆ. ಲಾಕ್ ಡೌನ್ ನಿಂದ ಸ್ವಲ್ಪ ವಿನಾಯಿತಿ ಪಡೆದಿದ್ದ ಶಿವಮೊಗ್ಗ ಜನತೆ ಇದೀಗ ಅನಗತ್ಯವಾಗಿ ರಸ್ತೆಗೆ ಬಂದರೆ ದಂಡ ತೆರಬೇಕಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತ ಮಾಡುತ್ತಿರುವ ಹೊಸಹೊಸ ಪ್ರಯತ್ನಗಳಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
C News TV Kannada News Online in cnewstv