ಶಿವಮೊಗ್ಗ: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಸಾಮಾನ್ಯ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ತಿಳಿಸಿದರು. ಶಿವಮೊಗ್ಗ ಸಮೀಪದ ಗೋಂದಿಚಟ್ನಳ್ಳಿಯ ರೈಸ್ ಮಿಲ್ ನಲ್ಲಿ ವಿತರಣೆಗಾಗಿ ಪ್ಯಾಕ್ ಮಾಡಲಾಗುತ್ತಿದ್ದ ಗೋದಾಮಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಆಹಾರದ ಕಿಟ್ ಗಳನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 300ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಸುಮಾರು 8000 ಸಂಕಷ್ಟಕ್ಕೊಳಗಾದ ಕುಟುಂಬಗಳ ಸದಸ್ಯರಿಗೆ ವಿತರಿಸುವುದಾಗಿ ತಿಳಿಸಿದರು. ಈ ಆಹಾರದ ಕಿಟ್ ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಒಂದು ಲೀಟರ್ ಎಣ್ಣೆ, 2 ಪುಳಿಯೋಗರೆ ಪ್ಯಾಕೆಟ್, ಎರಡು ಮಸಾಲ ಪ್ಯಾಕೆಟ್, ಒಂದು ಕೆಜಿ ಸಕ್ಕರೆ, ಒಂದು ಸೋಪು ಮತ್ತು ಒಂದು ಮಾಸ್ಕ್ ಇರಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ, ಮಹಾನಗರ ಪಾಲಿಕೆಯ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಚನ್ನಬಸಪ್ಪ ಮತ್ತಿತರರಿದ್ದರು.
C News TV Kannada News Online in cnewstv