ಶಿವಮೊಗ್ಗ : ಕರೋನ ವೈರಸ್ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಭಾನುವಾರ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಕರೋನಾ ವೈರಸ್ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕರೋನಾ ಪ್ರಕರಣಗಳು ವರದಿಯಾಗಿಲ್ಲ. ಮೂರು ಶಂಕಿತ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿವೆ. ಜಿಲ್ಲೆಯಲ್ಲಿ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಮ್ಸ್‍ನಲ್ಲಿ 30 ಹಾಸಿಗೆಯ ಪ್ರತ್ಯೇಕ ವಾರ್ಡ್ ಸಜ್ಜುಗೊಳಿಸಲಾಗಿದ್ದು, ವೈದ್ಯಾಧಿಕಾರಿಗಳ ತಂಡ ದಿನದ 24ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು..
ಕರೋನಾ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಒಂದು ಕಡೆ ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕೈಬಿಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 15ದಿನಗಳ ಕಾಲ ಯಾವುದೇ ಜಾತ್ರೆಗಳನ್ನು ನಡೆಸದಂತೆ ತಿಳಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ದೊಡ್ಡ ಪ್ರಮಾಣದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
C News TV Kannada News Online in cnewstv