ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಯುವ ಸಬಲೀಕರಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ.ಕೆ.ಎಸ್.ಈಶ್ವರಪ್ಪ ಅವರ 71ನೇ ಗಣರಾಜ್ಯೋತ್ಸವ ದಿನಾಚರಣೆಯ ಸಂದೇಶ
ನಮಸ್ಕಾರ. ಜಿಲ್ಲೆಯ ಎಲ್ಲಾ ಸಮಸ್ತ ನಾಗರಿಕ ಬಾಂಧವರಿಗೆ ಗಣರಾಜ್ಯೋತ್ಸವ ಶುಭಾಶಯಗಳು
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬಾಳುತ್ತೇವೆ, ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸಿ, ಅದನ್ನು ಎತ್ತಿಹಿಡಿಯುತ್ತೇವೆ. ನಮ್ಮದೇ ದೇಶ-ನಮ್ಮದೇ ಸಂವಿಧಾನ- ನಮ್ಮದೇ ಆಡಳಿತ-ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಸಮಸ್ತ ಭಾರತೀಯರೂ ಕೈಗೊಂಡ ದಿನ ನಮ್ಮ ಗಣರಾಜ್ಯ ದಿನ.
ಮಾನ್ಯ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿಯವರ ಆಶಯದಂತೆ ಸ್ವಚ್ಛ ಭಾರತ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ದೃಢ ಹೆಜ್ಜೆ ಇರಿಸಿದ್ದೇವೆ. ನಮ್ಮ ಗ್ರಾಮೀಣ ಪರಿಸರವನ್ನು ಸ್ವಚ್ಛ, ಸುಂದರವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲು ಈಗಾಗಲೇ ಚಾಲನೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್‍ಗಳಲ್ಲಿ ಘನತ್ಯಾಜ್ಯ ಘಟಕ ಸ್ಥಾಪಿಸಲಾಗುತ್ತಿದ್ದು, ಈ ತಿಂಗಳ ಅಂತ್ಯದ ಒಳಗಾಗಿ 25ಗ್ರಾಮ ಪಂಚಾಯತ್‍ಗಳಲ್ಲಿ ಘನತ್ಯಾಜ್ಯ ಘಟಕಗಳು ಕಾರ್ಯಾರಂಭ ಮಾಡಲಿವೆ.
ಇದೇ ರೀತಿ ಇಂಧನ ಸಬಲೀಕರಣಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಸೋಲಾರ್ ವ್ಯವಸ್ಥೆ ರೂಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ತಮ್ಮ ಬಳಕೆಗೆ ಅಗತ್ಯವಿರುವ ವಿದ್ಯುತ್ ತಾವೇ ಉತ್ಪಾದಿಸುವ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಶಿವಮೊಗ್ಗ ನಗರದಲ್ಲಿ ಪ್ರತಿಯೊಬ್ಬರಿಗೂ ಸೂರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆಶ್ರಯ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಎಲ್ಲರೂ, ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಯೋಜನೆ ರೂಪಿಸಿ ಕಾರ್ಯ ತತ್ಪರರಾಗಿದ್ದೇವೆ. ನಗರದ ಗೋವಿಂದಪುರದಲ್ಲಿ 44ಎಕ್ರೆ ಪ್ರದೇಶದಲ್ಲಿ ಜಿ+2 ಮಾದರಿಯಲ್ಲಿ 3ಸಾವಿರ ಮನೆಗಳ ನಿರ್ಮಾಣಕ್ಕಾಗಿ, ಟೆಂಡರ್ ಕರೆಯಲಾಗಿದೆ. ಮಾದರಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಗೋಪಿಶೆಟ್ಟಿಕೊಪ್ಪದಲ್ಲಿ 19ಎಕ್ರೆ ಪ್ರದೇಶದಲ್ಲಿ 1836 ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದಷ್ಟು ಬೇಗನೆ ಟೆಂಡರ್ ಕರೆದು ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಪೌರಕಾರ್ಮಿಕರಿಗೆ 168ಮನೆಗಳ ನಿರ್ಮಾಣಕ್ಕಾಗಿ ನವಲೆಯಲ್ಲಿ 9ಎಕ್ರೆ ಸ್ಥಳ ಗುರುತಿಸಲಾಗಿದ್ದು, ಮನೆ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿದೆ.
ಇದೇ ಮೊದಲ ಬಾರಿಗೆ ಕಾರ್ಖಾನೆ ಕಾರ್ಮಿಕರಿಗೆ ಮನೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಎರಡು ಸಾವಿರ ಮಂದಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲು ಸಿದ್ಲೀಪುರದಲ್ಲಿ 20ಎಕ್ರೆ ಗುರುತಿಸಲಾಗಿದ್ದು, ಫಲಾನುಭವಿಗಳ ಪಟ್ಟಿಗೆ ಆದಷ್ಟು ಬೇಗನೆ ಮಂಜೂರಾತಿ ನೀಡಲಾಗುವುದು.
ಭದ್ರಾವತಿಯಲ್ಲಿ 4ಸಾವಿರ ಜನರಿಗೆ ಜಿ+3 ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ಒಟ್ಟು 36ಎಕ್ರೆ ಜಾಗ ಗುರುತಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 956 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ರಾಜೀವ್‍ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಮೂಲಕ ತಲಾ 1.5ಲಕ್ಷ ರೂ. ಸಹಾಯಧನ ಒದಗಿಸಲಾಗುತ್ತಿದೆ.
ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ನೊಂದವರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಲಾಗಿದೆ. ಹಾನಿಗೀಡಾದ ರಸ್ತೆ, ಸೇತುವೆ, ಕಟ್ಟಡಗಳ ದುರಸ್ತಿ, ಪುನರ್ ನಿರ್ಮಾಣ ಕಾರ್ಯ ಯುದ್ದೋಪಾಧಿಯಲ್ಲಿ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 539 ರಸ್ತೆ ನಿರ್ಮಾಣ ಕಾಮಗಾರಿಗಳಿಗಾಗಿ 134ಕೋಟಿ ರೂ. ಒದಗಿಸಲಾಗಿದ್ದು, ಕ್ರಿಯಾ ಯೋಜನೆ ಮಂಜೂರು ಮಾಡಲಾಗಿದೆ.
ಜಿಲ್ಲೆಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಉನ್ನತಿಗಾಗಿ ಅನುದಾನ ಒದಗಿಸಿ ಕಾಮಗಾರಿ ಅನುಷ್ಟಾನಗೊಳಿಸಲಾಗಿದೆ. ಎಸ್‍ಎಫ್‍ಸಿ ಯೋಜನೆಯಡಿ ಶಿವಮೊಗ್ಗ ನಗರ ವ್ಯಾಪ್ತಿಯ 87ಶಾಲೆಗಳ 79ಕಾಮಗಾರಿಗಳಿಗೆ 10ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸ್ವಚ್ಛ ಭಾರತ ಯೋಜನೆ ಅಡಿ ನಗರ ವ್ಯಾಪ್ತಿಯ ಶಾಲೆಗಳ ಶೌಚಾಲಯ ದುರಸ್ತಿಗಾಗಿ 5ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ 791 ಪ್ರಾಥಮಿಕ ಶಾಲೆಗಳು ಹಾಗೂ 37ಪ್ರೌಢಶಾಲೆಗಳ ಒಟ್ಟು 1707 ಕೊಠಡಿಗಳ ದುರಸ್ತಿಗಾಗಿ 35 ಕೋಟಿ ರೂ. ನಿಗದಿಪಡಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಸಂಪರ್ಕ ರಸ್ತೆಗಳು, ನೂತನ ರೈಲು ಮಾರ್ಗ ಸಂಪರ್ಕಗಳಿಗೆ ಒತ್ತು ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದೆ.
ಜೋಗ ಜಲಪಾತ, ಕವಲೆದುರ್ಗ, ಶಿವಪ್ಪ ನಾಯಕ ಅರಮನೆ, ನಗರ ಕೋಟೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ 20ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಗುರುದೇವ ರವೀಂದ್ರನಾಥ ಠ್ಯಾಗೋರರು ಹೇಳಿದಂತೆ ‘ಎಲ್ಲಿ ಮನೆಯೊಗ್ಗಟ್ಟು, ಸಂಸಾರ ನೆಲೆಗಟ್ಟು’ ಎಂಬುದನ್ನು ಅರ್ಥೈಸಿಕೊಂಡು, ಮೇಲು, ಕೀಳು, ಬಡವ, ಬಲ್ಲಿದನೆಂಬ ಭೇದ ಮರೆತು ರಾಷ್ಟ್ರ ನಿರ್ಮಾಣ ಮಾಡೋಣ ಎಂದರು.
C News TV Kannada News Online in cnewstv