ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆಯನ್ನು ಒದಗಿಸಲು ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.
ಅವರು ಮಂಗಳವಾರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೆಗ್ಗಾನ್ ಆಸ್ಪತ್ರೆಯ ಕುಂದುಕೊರತೆ ಹಾಗೂ ಲೋಪ ದೋಷಗಳ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಬಹುತೇಕ ಔಷಧಿಗಳಿಗೆ ಚೀಟಿ ಬರೆದುಕೊಡಲಾಗುತ್ತಿದೆ. ಸಿರಿಂಜಿ, ಬ್ಯಾಂಡೇಜ್ ಸೇರಿದಂತೆ ಸಣ್ಣಪುಟ್ಟ ಸಾಮಾಗ್ರಿಗಳನ್ನು ಸಹ ಹೊರಗಿನಿಂದ ಖರೀದಿಸಿ ತರುವಂತೆ ರೋಗಿಗಳಿಗೆ ಸೂಚಿಸಲಾಗುತ್ತಿದೆ. ಎಕ್ಸ್‍ರೇ ತೆಗೆದರೂ ಅದರ ಶೀಟ್ ನೀಡುತ್ತಿಲ್ಲ. ಬಹುತೇಕ ಹೊರರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. 10ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಘಟಕ ಆರಂಭಿಸಿದರೂ ಕಾರ್ಯಾಚರಿಸುತ್ತಿಲ್ಲ. ಕರ್ತವ್ಯದ ಅವಧಿಯಲ್ಲಿ ವೈದ್ಯರು, ಸಿಬ್ಬಂದಿ ಲಭ್ಯವಿರುವುದಿಲ್ಲ. ಎಕ್ಸ್‍ರೇ ಟೆಕ್ನಿಷಿಯನ್ ಹುದ್ದೆಯನ್ನು ಭರ್ತಿ ಮಾಡಿಲ್ಲ. ಎಲ್ಲಾ 7 ರೇಡಿಯಾಲಜಿಸ್ಟ್ ಹುದ್ದೆ ಖಾಲಿಯಿದೆ. ಯಾವುದೇ ವಾರ್ಡ್‍ನಲ್ಲಿ ವೈದ್ಯರು ಇರುವುದಿಲ್ಲ. ಆಸ್ಪತ್ರೆಯಲ್ಲಿ ಪರ್ಯಾಯ ಔಷಧಿಗಳು ಲಭ್ಯವಿದ್ದರೂ, ವೈದ್ಯರು ಅಂತಹ ಔಷಧಿಗಳನ್ನು ನೀಡದರೆ ಹೊರಗಿನಿಂದ ಔಷಧಿ ಖರೀದಿಸಲು ರೋಗಿಗಳಿಗೆ ನಿರ್ಬಂಧಿಸುತ್ತಿದ್ದಾರೆ ಎಂದು ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯ ಪ್ರಸನ್ನ, ಉಪ ಮೇಯರ್ ಚನ್ನಬಸಪ್ಪ ಅವರು ಸಚಿವರ ಗಮನಕ್ಕೆ ತಂದರು.
ಮೆಗ್ಗಾನ್ ಆಸ್ಪತ್ರೆಯ ಎಲ್ಲಾ ಲೋಪಗಳನ್ನು ಎರಡು ತಿಂಗಳ ಒಳಗಾಗಿ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಔಷಧಿಗಾಗಿ ಚೀಟಿ ಬರೆದುಕೊಡುವ ಬಗ್ಗೆ ದೂರುಗಳು ಬರಬಾರದು. ದೂರುಗಳು ಬಂದರೆ ಅಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ. ರೇಡಿಯಾಲಜಿಸ್ಟ್ ಹುದ್ದೆ ಭರ್ತಿಯಾಗುವ ತನಕ ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಪಡೆದುಕೊಳ್ಳಬೇಕು. ಎಕ್ಸ್‍ರೇ ಶೀಟನ್ನು ರೋಗಿಗಳಿಗೆ ನೀಡಬೇಕು. ಕರ್ತವ್ಯದಲ್ಲಿರುವ ವೈದ್ಯರ ಮತ್ತು ಸಿಬ್ಬಂದಿಗಳ ಚಾರ್ಟ್ ಎಲ್ಲಾ ಕಡೆ ಹಾಕಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿ 10ವರ್ಷಗಳಾದರೂ ಇನ್ನೂ ಯಾಕೆ ಆರಂಭವಾಗಿಲ್ಲ. ಅದರ ಕಟ್ಟಡ ಕಾಮಗಾರಿ ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳ್ಳಬೇಕು. ಹೃದಯ ರೋಗಗಳಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾಮಗಾರಿ ಎರಡು ತಿಂಗಳ ಒಳಗಾಗಿ ಪೂರ್ತಿಯಾಗಬೇಕು. ಔಷಧಿಗಳನ್ನು ಸರಿಯಾಗಿ ಪೂರೈಸದೆ ಕರ್ತವ್ಯ ಲೋಪ ಮಾಡುತ್ತಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಮೆಗ್ಗಾನ್ ನಿರ್ದೇಶಕ ಡಾ.ಲೇಪಾಕ್ಷಿ ಬಿ.ಜಿ, ಆಡಳಿತಾಧಿಕಾರಿ ಶಿವಕುಮಾರ್, ಹಿರಿಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Recent Comments