ಶಿವಮೊಗ್ಗ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲವೇ. ಹೀಗೊಂದು ಪ್ರಶ್ನೆ ಇದೀಗ ಉದ್ಭವಿಸಿದೆ. ಎರಡು ದಿನಗಳ ಹಿಂದೆ ಕಾಯ್ದೆ ವಿರೋಧಿಸಿ ಶಿವಮೊಗ್ಗದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಜಿಲ್ಲಾ ಕಾಂಗ್ರೆಸ್ ನಿಂದ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಆದರೆ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಅನುಮತಿ ಕೋರಿದ್ದರು ಪೊಲೀಸ್ ಅಧಿಕಾರಿಗಳು ಕರೆಮಾಡಿ ಪ್ರತಿಭಟನೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಅನುಮತಿ ನೀಡದೇ ಇದ್ದರೂ ಡಿಸೆಂಬರ್ 19ರಂದು ಪ್ರತಿಭಟನೆ ನಡೆಸಿಯೇ ತೀರುವುದಾಗಿ ಸುಂದರೇಶ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಕಾಶಿ ವಿಶ್ವನಾಥ, ರಾಮೇಗೌಡ, ಯಮುನಾ ರಂಗೇಗೌಡ ಮತ್ತಿತರರಿದ್ದರು.
C News TV Kannada News Online in cnewstv