Breaking News

ಸರ್ಕಾರಿ ನೌಕರರೇ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದರೇ?

ಶಿವಮೊಗ್ಗ: ಸರ್ಕಾರಿ ನೌಕರರೇ ಅಂಗಡಿ ಮಾಲೀಕರೊಬ್ಬರ ಮೇಲೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ವಿನೋಬನಗರದ ಪೊಲೀಸ್ ಚೌಕಿ ಬಳಿಯ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಸರ್ಕಾರಿ ನೌಕರರು ಹಲ್ಲೆ ನಡೆಸಿರುವ ಸಿಸಿ ಟಿವಿ ದೃಷ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆತನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಕೇಸನ್ನೂ ದಾಖಲಿಸಿ ಜೈಲಿಗೂ ಕಳಿಸಿದ್ದಾರೆ. ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿ ಬಳಿಯಿರುವ ಬಟ್ಟೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಇರಬಹುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ದಾಳಿ ನಡೆಸಲು ಬಂದಿದ್ದಾರೆ. ಆದರೆ ಈ ವೇಳೆ ಅಂಗಡಿ ಮಾಲೀಕ ಗ್ಲಾಸ್ ಡೋರ್ ಲಾಕ್ ಮಾಡಿಕೊಂಡು ಹೊರಗೆ ಹೋಗಿದ್ದ. ಈ ವೇಳೆ ಪಾಲಿಕೆ ಸಿಬ್ಬಂದಿ ಬಲವಂತವಾಗಿ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಮೊಬೈಲ್ ಅಂಗಡಿ ಮಾಲೀಕ ಗ್ಲಾಸ್ ಡೋರ್ ಒಡೆದು ಹೋಗುತ್ತದೆ ಸ್ವಲ್ಪ ಸಮಯದಲ್ಲಿ ಅಂಗಡಿ ಮಾಲೀಕರು ಬರುತ್ತಾರೆ ಎಂದು ಹೇಳಿದ್ದಾನೆ. ಈ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ಮೊಬೈಲ್ ಅಂಗಡಿ ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪಾಲಿಕೆ ಸಿಬ್ಬಂದಿ ಮೊಬೈಲ್ ಅಂಗಡಿ ಮಾಲೀಕ ಮಂಜುಗೆ ಹಿಂದಿನಿಂದ ಒದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಂಜು ಕೋಲಿನಿಂದ ಒದ್ದವನಿಗೆ ಹೊಡೆದಿದ್ದಾನೆ. ಈ ವೇಳೆ ಹೆಲ್ತ್ ಇನ್ಸ್ ಪೆಕ್ಟರ್ ನಾಗರಾಜ್ ಸೇರಿದಂತೆ ಎಂಟಕ್ಕೂ ಹೆಚ್ಚು ಪಾಲಿಕೆ ಸಿಬ್ಬಂದಿ ಮಂಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಎಲ್ಲ ದೃಷ್ಯಾವಳಿಗಳು ಅಂಗಡಿ ಎದುರಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ತಾವೇ ಗಲಾಟೆ ಆರಂಭಿಸಿ ಅಂಗಡಿ ಮಾಲೀಕನನ್ನು ಥಳಿಸಿದ ಪಾಲಿಕೆ ಹೆಲ್ತ್ ಇನ್ಸ್ ಪೆಕ್ಟರ್ ನಾಗರಾಜ್ ಸೀದಾ ವಿನೋಬನಗರ ಪೊಲೀಸ್ ಠಾಣೆಗೆ ತೆರಳಿ ಮಂಜು ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುನನ್ನು ಬಂಧಿಸಿ ಎರಡು ದಿನ ಜೈಲಿಗೂ ಕಳಿಸಿದ್ದಾರೆ. ಜಾಮೀನು ಪಡೆದ ಮಂಜು ಎರಡು ದಿನದ ಬಳಿಕ ಜೈಲಿನಿಂದ ಹೊರಬಂದಿದ್ದಾನೆ. ಆದರೆ ಹಿಗ್ಗಾಮುಗ್ಗಾ ಥಳಿಸಿರುವ ಪಾಲಿಕೆ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..

https://youtu.be/QT_Ndl2omf4

 

 

Leave a Reply

Your email address will not be published. Required fields are marked *

*