ಶಿವಮೊಗ್ಗ : ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ 14.61 ಕೋಟಿ ರೂ. ಅನುದಾನ ಒದಗಿಸಿದ್ದು, ಮೂರು ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ 86ಶಾಲೆಗಳಲ್ಲಿ ಕೊಠಡಿ ದುರಸ್ತಿಗಾಗಿ 9.67 ಕೋಟಿ ರೂ. ಹಾಗೂ 47 ಶೌಚಾಲಯ ಬ್ಲಾಕ್‍ಗಳ ನಿರ್ಮಾಣಕ್ಕಾಗಿ 4.94 ಕೋಟಿ ರೂ. ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೂರು ತಿಂಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳು ಪೂರ್ಣಗೊಂಡು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಸಿದ್ಧವಾಗಲಿದೆ. ಈ ಎಲ್ಲಾ ಶಾಲೆಗಳಿಗೆ ಅಗತ್ಯ ಪೀಠೋಪಕರಣ ಒದಗಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮುಂದೆ ಬಂದಿದೆ ಎಂದು ಸಚಿವರು ತಿಳಿಸಿದರು.
ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಆಯಾ ಶಾಲಾಭಿವೃದ್ಧಿ ಸಮಿತಿಯವರು ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಬಾರದು. ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರಬೇಕು. ಈ ಶೌಚಾಲಯಗಳ ಸ್ವಚ್ಛತೆಗೆ ಆಯಾ ಶಾಲಾಭಿವೃದ್ಧಿ ಸಮಿತಿಯವರು ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಿ ಕ್ರಮ ಕೈಗೊಳ್ಳಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛತೆಯನ್ನು ಮಾಡಿಸಬಾರದು ಎಂದು ಅವರು ತಿಳಿಸಿದರು.
ರಜಾದಿನಗಳಲ್ಲಿ ಹಾಗೂ ಶಾಲಾ ಅವಧಿಯ ಬಳಿಕ ಶಾಲೆಗಳ ವಠಾರದಲ್ಲಿ ಜೂಜಾಟ ಮುಂತಾದ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಕುರಿತು ಸೂಕ್ತ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಅಂತಹ ಕೃತ್ಯಗಳು ನಡೆಯುತ್ತಿದ್ದರೆ ನೇರವಾಗಿ ಎಸ್ಪಿಯವರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಅನುರಾಧ ಮತ್ತಿತರ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
Recent Comments