ಜಿಲ್ಲೆಯ ಹಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟು 14 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರ ವಿವರ: ಶಿವಮೊಗ್ಗ ನಗರದ ಇಮಾಮ್ ಬಾಡ, ಸೀಗೆಹಟ್ಟಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗುಡ್ಡೇಕಲ್, ಪುಟ್ಟಪ್ಪ ಕ್ಯಾಂಪ್, ಟ್ಯಾಂಕ್ ಮೊಹಲ್ಲ ಮತ್ತು ವಿದ್ಯಾನಗರ, ಭದ್ರಾವತಿ ತಾಲೂಕಿನ ಕವಲಗುಂದಿ, ತೀರ್ಥಹಳ್ಳಿಯ ರಾಮೇಶ್ವರ ಸಭಾಭವನ, ಸೊರಬದ ಹಿರೇಕಾಂಶಿ ಗ್ರಾಮ, ಶಕುನವಳ್ಳಿ, ಜಡೆ, ಹಣಜಿ, ಮಲ್ಲಾಪುರ ಗ್ರಾಮ ಹಾಗೂ ಮೂಡಿಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ ಊಟ, ಉಪಾಹಾರ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ವಾಸ್ತವ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಎರಡು ಜೀವ ಹಾನಿ ಸಂಭವಿಸಿರುವುದು ದೃಢಪಟ್ಟಿದ್ದು, ತಲಾ 5ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7692 ಹೆಕ್ಟೇರ್ ಕೃಷಿ ಪ್ರದೇಶ ಹಾಗೂ 1106 ಹೆ. ತೋಟಗಾರಿಕಾ ಪ್ರದೇಶ ಸೇರಿದಂತೆ ಒಟ್ಟು 8798 ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. ತಾಲೂಕುವಾರು ವಿವರ ಇಂತಿದೆ. ಶಿವಮೊಗ್ಗ 361 ಹೆ., ಭದ್ರಾವತಿ 109ಹೆ, ತೀರ್ಥಹಳ್ಳಿ 430ಹೆ, ಸಾಗರ 2935 ಹೆ, ಹೊಸನಗರ 532 ಹೆ, ಶಿಕಾರಿಪುರ 237 ಹೆ ಹಾಗೂ ಸೊರಬ ತಾಲೂಕಿನಲ್ಲಿ 4194 ಹೆ., ಪ್ರದೇಶ ಜಲಾವೃತವಾಗಿವೆ.
ಜಿಲ್ಲೆಯಲ್ಲಿ ಒಟ್ಟು 10 ಜಾನುವಾರುಗಳು ಮೃತಪಟ್ಟಿದ್ದು, 404 ಮನೆಗಳಿಗೆ ಭಾಗಶಃ ಹಾನಿಯುಂಟಾಗಿವೆ. ಹೊಸನಗರ ತಾಲೂಕಿನಲ್ಲಿ ಭೂಕುಸಿತದಿಂದಾಗಿ ಎರಡು ರಸ್ತೆಗಳು ಹಾನಿಯಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಕಾರಣಗಿರಿ ಗಣಪತಿ ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು-ರಾಣೆಬೆನ್ನೂರು ರಸ್ತೆ ಮಾರ್ಗ ಸಂಚಾರ ನಿರ್ಬಂಧಿಸಿ, ಶಿವಮೊಗ್ಗ ಕಡೆಯಿಂದ ಬರುವ ಭಾರಿ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ ಮಾರ್ಗವಾಗಿ ಸಂಚರಿಸಬಹುದಾಗಿದೆ. ಇದೇ ರೀತಿ ನಾಗೋಡು ಗ್ರಾಮ ರಾ.ಹೆ ಸಂಚಾರ ನಿರ್ಬಂಧಿಸಲಾಗಿದ್ದು ಪರ್ಯಾಯವಾಗಿ ನಗರ-ಹುಲಿಕಲ್‍ಘಾಟ್-ಹೊಸಂಗಡಿ-ಸಿದ್ದಾಪುರ ಮುಖಾಂತರ ಸಂಚರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸೂಚನೆ: ನದಿಪಾತ್ರಗಳಲ್ಲಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಹಳೆಯ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವವರು ಸುರಕ್ಷತೆ ದೃಷ್ಟಿಯಿಂದ ಮನೆ ತೆರವುಗೊಳಿಸಬೇಕು. ತುರ್ತು ಪರಿಹಾರ ಕಾರ್ಯಗಳಿಗೆ ಪ್ರತಿ ತಾಲೂಕಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಾಲೆ ಪ್ರಾರಂಭ ಮಾಡುವ ಪೂರ್ವದಲ್ಲಿ ಶಾಲಾ ಸುಸ್ಥಿತಿಯನ್ನು ಖಾತ್ರಿಪಡಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
C News TV Kannada News Online in cnewstv