Breaking News

ತೆರೆದ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಕ್ರಿಮಿನಲ್ ಮೊಕದ್ದಮೆ: ಚಾರುಲತಾ ಸೋಮಲ್ ಎಚ್ಚರಿಕೆ

 

ಶಿವಮೊಗ್ಗ ನಗರದ ಹಲವು ವಾರ್ಡ್‍ಗಳ ವ್ಯಾಪ್ತಿಯಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಸಂಬಂಧಪಟ್ಟ ವ್ಯಾಪ್ತಿಯ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಎಚ್ಚರಿಕೆ ನೀಡಿದ್ದಾರೆ.

ವಾರ್ಡ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಕಂಡು ಬಂದಿದ್ದು, ಅವುಗಳನ್ನು ತಕ್ಷಣ ಮುಚ್ಚುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಎಚ್ಚರಿಕೆ ನೀಡಲಾಗಿದೆ. ತೆರೆದ ಮ್ಯಾನ್‍ಹೋಲ್‍ಗಳಿಂದಾಗಿ ಯಾವುದೇ ಅವಘಡಗಳು ಸಂಭವಿಸುವ ಮೊದಲೇ ಮುಚ್ಚಬೇಕು. ತೆರೆದ ಮ್ಯಾನ್‍ಹೋಲ್‍ನಿಂದ ಅವಘಡಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

ತಮ್ಮ ವಾರ್ಡ್‍ಗಳಿಗೆ ಸಂಬಂಧಿಸಿದಂತೆ ಇರುವ ತೆರೆದ ಮ್ಯಾನ್‍ಹೋಲ್ ಪಟ್ಟಿಯನ್ನು ಒದಗಿಸಿ, 10ದಿನಗಳ ಒಳಗಾಗಿ ಅವುಗಳನ್ನು ಮುಚ್ಚಿ ವರದಿಯನ್ನು ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಬಹುತೇಕ ತೆರೆದ ಮ್ಯಾನ್‍ಹೋಲ್‍ಗಳನ್ನು ಮುಚ್ಚುವ ಕಾರ್ಯ ನಡೆದಿದ್ದು, ಗಂಭೀರವಾದ ಪ್ರಕರಣಗಳಲ್ಲಿ ಕಾಂಕ್ರೀಟ್ ಮೂಲಕ ಹಾಗೂ ಇತರ ಕಡೆಗಳಲ್ಲಿ ಕಲ್ಲು, ಮಣ್ಣು ಮೂಲಕ ತಾತ್ಕಾಲಿಕವಾಗಿ ಮ್ಯಾನ್‍ಹೋಲ್ ಮುಚ್ಚಲಾಗಿದೆ. ಈ ಕುರಿತು ವರದಿಯನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.

ಇದೇ ರೀತಿ ಅಪಾಯಕಾರಿಯಾಗಿ ತೆರೆದಿರುವ ಪಾದಚಾರಿ ಚರಂಡಿಗಳನ್ನು ಸಹ ಮುಚ್ಚಲು ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ಥಳಕ್ಕೆ ಭೇಟಿ ನೀಡಿ ಆದ್ಯತೆ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

 

Leave a Reply

Your email address will not be published. Required fields are marked *

*