ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಮಲೆನಾಡಿಗರ ತೀವ್ರ ವಿರೋಧ.
ಶಿವಮೊಗ್ಗ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗಲು ಮಲೆನಾಡಿಗರು ಕಾರಣವಲ್ಲ. ಹೀಗಿರುವಾಗ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಏಕೆ ನೀರು ಪೂರೈಕೆ ಮಾಡಬೇಕು. ಈಗಾಗಲೇ ಅಣೆಕಟ್ಟೆಗಳ ನಿರ್ಮಾಣಕ್ಕಾಗಿ ಲಕ್ಷಾಂತರ ಎಕರೆ ಅರಣ್ಯವನ್ನು ನಾಶ ಮಾಡಿ ಮಲೆನಾಡನ್ನೇ ಹಾಳು ಮಾಡಲಾಗಿದೆ. ಇದೀಗ ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರು ಒದಗಿಸಲು ಮತ್ತೆ ಅರಣ್ಯ ನಾಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಲೆನಾಡಿಗರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಲಿಂಗನಮಕ್ಕಿ ನೀರನ್ನು ಮಲೆನಾಡಿನ ಜನರಿಗೇ ನೀಡಿ ಎಂದು ಹೋರಾಟದ ಹಾದಿಯನ್ನೂ ಹಿಡಿದಿದ್ದಾರೆ.
ರಾಜ್ಯದಲ್ಲಿ ಯಾವುದೇ ವಿವಾದವಿಲ್ಲದ ಜಲಾಶಯವೆಂದರೆ ಅದು ಲಿಂಗನಮಕ್ಕಿ ಜಲಾಶಯ ಮಾತ್ರ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದಂತೆ ಸರ್ಕಾರದ ಕಣ್ಣು ಲಿಂಗನಮಕ್ಕಿ ಜಲಾಶಯದ ಮೇಲೆ ಬಿದ್ದಿದೆ. ಇದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಲೆನಾಡಿನ ಸಂಪತ್ತು ಮಲೆನಾಡಿನವರಿಗೆ ಸೇರಿದ್ದು. ನಾವು ಇಲ್ಲಿನ ಪ್ರಕೃತಿಯೊಂದಿಗೆ ಬೆರೆತಿದ್ದೇವೆ. ನಮ್ಮ ಪರಿಸರವನ್ನು ಹಾಳು ಮಾಡಬೇಡಿ. ಬೆಂಗಳೂರಿಗೆ ನೀರು ಕೊಡುವ ಮೊದಲು ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡುವಾಗ ಸಂತ್ರಸ್ಥರಾದವರಿಗೆ ಮೊದಲು ಪರಿಹಾರ ನೀಡಿ. ಜೊತೆಗೆ ಮಲೆನಾಡಿನಲ್ಲೇ ಕುಡಿಯುವ ನೀರಿಗೆ ಹಾಹಾಕಾರವಿದೆ. ಮೊದಲು ಮಲೆನಾಡಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ. ಮಲೆನಾಡಿಗೆ ಯಾವುದೇ ನೀರಾವರಿ ಯೋಜನೆಗಳಿಲ್ಲ. ಹೀಗಾಗಿ ಶರಾವತಿಯಿಂದ ಮಲೆನಾಡಿನ ಭೂಮಿಗೆ ನೀರಾವರಿ ಸಂಪರ್ಕ ಕಲ್ಪಿಸಿ ಎಂದು ಮಲೆನಾಡಿಗರು ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನಲ್ಲಿನ ನೀರಿನ ಸಮಸ್ಯೆಗೆ ಮಲೆನಾಡನ್ನೇಕೆ ಬಲಿಕೊಡುತ್ತೀರಿ. ಅಲ್ಲಿನ ಸಮಸ್ಯೆಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಮಲೆನಾಡಿಗೇಕೆ ಮತ್ತೆ ಸಮಸ್ಯೆ ತಂದೊಡ್ಡುತ್ತಿದ್ದೀರಿ. ಮಳೆ ನೀರುಕೊಯ್ಲು ಕಡ್ಡಾಯ ಮಾಡಿ. ಕೆರೆ ಒತ್ತುವರಿ ತೆರವುಗೊಳಿಸಿ. ಬೆಂಗಳೂರಿನಲ್ಲಿ ಸುರಿಯುವ ಮಳೆ ನೀರನ್ನು ಚಿಕ್ಕ ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿದರೆ 15 ಟಿಎಂಸಿ ನೀರನ್ನು ಶೇಖರಿಸಬಹುದು. ಮೊದಲು ಈ ಕೆಲಸ ಮಾಡಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ನೀರು ಶೇಕಡಾ 40 ರಷ್ಟು ಬೆಂಗಳೂರಿನಲ್ಲಿ ಪೋಲಾಗುತ್ತಿದೆ ಎಂದು ಹೇಳಿದೆ. ಹೀಗೆ ನೀರು ಪೋಲಾಗುವುದನ್ನು ತಡೆಗಟ್ಟಿ ಎಂದು ಮಲೆನಾಡಿಗರು ಸರ್ಕಾರವನ್ನು ಆಗ್ರಹಿಸಲಾರಂಭಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬರೋಬ್ಬರಿ ಎಂಟು ಜಲಾಶಯಗಳನ್ನು ನಿರ್ಮಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಸರ್ಕಾರ ಜಲ ಗಂಡಾತರವನ್ನೇ ತಂದಿಟ್ಟಿದೆ. ಈ ಎಂಟು ಜಲಾಶಯಗಳಿಂದ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಈ ಜಲಾಶಯಗಳಿಂದ ಮಲೆನಾಡಿಗೆ ಒಂದು ರೂಪಾಯಿ ಅನುಕೂಲವೂ ಇಲ್ಲವಾಗಿದೆ. ಹೀಗಿರುವಾಗ ಮತ್ತೆ ಅರಣ್ಯ ನಾಶ ಮಾಡಿ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಅವಕಾಶ ನೀಡುವುದೇ ಇಲ್ಲ ಎಂದು ಮಲೆನಾಡಿಗರು ಪಟ್ಟು ಹಿಡಿದು ಕುಳಿತಿದ್ದಾರೆ. ಈಗಾಗಲೇ ಈ ಬಗ್ಗೆ ಹೋರಾಟ ನಡೆಸಲು ಅಲ್ಲಲ್ಲಿ ಸಭೆಗಳೂ ನಡೆಯಿತ್ತಿದ್ದು. ಕೆಲವೇದಿನಗಳಲ್ಲಿ ಈ ಹೋರಾಟ ಉಗ್ರ ಸ್ವರೂಪ ಪಡೆಯುವುದರಲ್ಲಿ ಅನುಮಾನವೇ ಇಲ್ಲ.