Breaking News

ಮಹಾನ್ ಕಲಾವಿದ ಲೋಕನಾಥ್ ಇನ್ನಿಲ್ಲ

 

ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ಲೋಕನಾಥರು ಜನಿಸಿದ್ದು ಆಗಸ್ಟ್ 14, 1927ರಂದು.
ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗದಲ್ಲಿ
ಇಂದಿಗೂ ಅಜರಾಮರ. ಸಂಸ್ಕಾರ, ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ಮನೆ ಕಥೆ, ಹೌಸ್ ಫುಲ್, ಪುಷ್ಪಕ ವಿಮಾನ, ಬೆಳದಿಂಗಳ ಬಾಲೆ, ಬಂಗಾರದ ಮನುಷ್ಯ, ಕಥಾ ಸಂಗಮ, ಗೆಜ್ಜೆಪೂಜೆ, ಹೊಸ ನೀರು, ಕಿಟ್ಟು ಪುಟ್ಟು, ಎಲ್ಲರಂಥಲ್ಲ ನನ್ನ ಗಂಡ, ಪ್ರೇಮಾಚಾರಿ ಹೀಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 650ಕ್ಕೂ ಹೆಚ್ಚಿದೆ. ಲೋಕನಾಥ್ ಅವರು ಕಿರುತೆರೆಯಲ್ಲೂ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಅಲ್ಲದೆ, ಅನೀಶ್, ನಿರೀಕ್ಷೆ ಮುಂತಾದ ಧಾರವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಶಾಂಡಿಲ್ಯ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ ಸ್ಟುಡಿಯೋ ಸಹ ತೆರೆದಿದ್ದರು.

90 ವರ್ಷದ ಲೋಕನಾಥ್ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಅವರು ಕೊನೆಯ ಉಸಿರೆಳೆದಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೋಕನಾಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

*