ತೀರ್ಥಹಳ್ಳಿ: ತನ್ನ ತಂಗಿಯನ್ನು ಪ್ರೀತಿಸ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಚಾಕುವಿನಿಂದ ಇರಿದ ಘಟನೆ ತೀರ್ಥಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜು ಬಳಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಹೊಟ್ಟೆಯ ಬಲ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಬಾಲಕನನ್ನು ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವನನ್ನು ಯಡೇಹಳ್ಳಿ ಕೆರೆಯ ದರ್ಶನ್ ಎಂದು ಗುರುತಿಸಲಾಗಿದ್ದು ಚಾಕು ಇರಿದ ಆರೋಪಿ ಅವಿನಾಶ್ ಪಿಂಟೋ ಸ್ಥಳದಿಂದ ಪರಾರಿಯಾಗಿದ್ದು ಆತನ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ. ತೀರ್ಥಹಳ್ಳಿ ಜೂನಿಯರ್ ಕಾಲೇಜಿಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ದರ್ಶನ್ ಸಹೋದರಿಯನ್ನ ಅವಿನಾಶ್ ಪ್ರೀತಿಸುತ್ತಿದ್ದ ದರ್ಶನ್ ಈ ಬಗ್ಗೆ ಅವಿನಾಶ್ ಗೆ ಹಲವು ಬಾರಿ ಎಚ್ಚರಿಸಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಇದೀಗ ಅದರಿಂದ ಸಿಟ್ಟಾದ ಅವಿನಾಶ್ ಪಿಂಟೋ ಏಕಾಏಕಿ ಕಾಲೇಜಿನಿಂದ ಹೊರಗೆ ಕರೆಸಿಕೊಂಡು ದರ್ಶನ್‍ಗೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ ದರ್ಶನ್ ಹೊಟ್ಟೆಗೆ 2ಬಾರಿ, ಕತ್ತಿಗೆ ಸಮೀಪದಲ್ಲಿ ಚಾಕು ಇರಿತದಿಂದ ಗಾಯವಾಗಿದೆ. ಇದರಿಂದ ಗಂಭೀರ ಗಾಯಗೊಂಡಿರುವ ದರ್ಶನ್‍ನನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ ಪರಿಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನಂತರವಷ್ಟೆ ಮುಂದಿನ ಸ್ಥಿತಿಯನ್ನು ಹೇಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಾಕು ಇರಿತದಿಂದ ಗಲಿಬಿಲಿಗೊಂಡ ಜೂನಿಯರ್ ಕಾಲೇಜಿನ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಪೋಲಿಸರು ಕೂಡ ಭದ್ರತೆ ಒದಗಿಸಿದ್ದರು. ತೀರ್ಥಹಳ್ಳಿ ಸಬ್ ಇನ್ಸ್‍ಪೆಕ್ಟರ್ ಸುರೇಶ್‍ರವರು ನಮ್ಮೂರ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ ತೀರ್ಥಹಳ್ಳಿಯಲ್ಲಿ ಇತ್ತೀಚಿಗೆ ಹೆಚ್ಚಿನ ಇಂತಹ ಘಟನೆಗಳು ನಡೆಯುತ್ತಿದೆ, ಆರೋಪಿ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್
C News TV Kannada News Online in cnewstv