Cnewstv / 25.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಲ್ಲಮ ಪ್ರಭುಗಳ ತತ್ವ ಆದರ್ಶ ಪ್ರತಿಯೊಬ್ಬರಿಗೂ ಮಾರ್ಗದರ್ಶಿ – ಮಧು ಬಂಗಾರಪ್ಪ.
ಶಿವಮೊಗ್ಗ : 12ನೇ ಶತಮಾನದ ಶಿವಶರಣ ಅಲ್ಲಮ ಪ್ರಭುಗಳ ತತ್ವ ಆದರ್ಶ, ವಚನ ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಕ್ಕಿನ ಕಲ್ಮಠದಲ್ಲಿ ಪರಮ ತಪಸ್ವಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನ, 532ನೇ ಮಾಸಿಕ ಶಿವಾನುಭವಗೋಷ್ಠಿ, ಅಲ್ಲಮ ಪ್ರಭು, ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶಿವಶರಣರ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾನು ಸಹ ನನ್ನ ಜೀವನದಲ್ಲಿ ವಚನ ಸಾಹಿತ್ಯ ಮೌಲ್ಯಗಳನ್ನು ಅನುಷ್ಠಾನ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ. ಅಲ್ಲಮಪ್ರಭು ಜನ್ಮ ಸ್ಥಳ ಸೇರಿದಂತೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಶಿವಶರಣರ ಕ್ಷೇತ್ರಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸುತ್ತೇನೆ. ಎಲ್ಲ ಗುರುಗಳ ಮಾರ್ಗದರ್ಶನದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನ ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv