Breaking News

ಲೋಕಸಭೆಗೆ ಬಲಿಯಾದ ಶಿವಮೊಗ್ಗ ದಸರಾ

ಪ್ರತೀ ವರ್ಷ ಮಹಾನಗರಪಾಲಿಕೆ ವತಿಯಿಂದ ನಗರದಲ್ಲಿ ಅದ್ದೂರಿ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಈ ದಸರಾ ಕಾರ್ಯಕ್ರಮಕ್ಕೆ ಲೋಕಸಭಾ ಉಪಚುನಾವಣೆಯ ಕರಿನೆರಳು ಆವರಿಸಿದೆ.
ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ ಶಿವವಗ್ಗದಲ್ಲಿ ನಡೆಯುವ ದಸರಾ ಅತ್ಯಂತ ವೈಭವದಿಂದ ಕೂಡಿರುತ್ತಿತ್ತು.
೧೦ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ದಸರಾ ಅಂಗವಾಗಿ ನಡೆಯುತ್ತಿದ್ದವು. ಇದಕ್ಕಾಗಿ ಮಹಾನಗರಪಾಲಿಕೆಯ ಮೇಯರ್ ಆದಿಯಾಗಿ ಎಲ್ಲರೂ ಸಹ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಆದರೆ ಈ ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದು, ಮೇಯರ್ ಹಾಗೂ ಉಪಮೇಯರ್‌ರವರ ಮೀಸಕಾತಿ ಪ್ರಕಟಗೊಂಡಿದ್ದರೂ ಸಹ ಮೇಯರ್- ಉಪಮೇಯರ್ ಚುನಾವಣೆ ನಡೆದಿಲ್ಲ. ಇದರ ಜೊತೆಗೆ ಲೋಕಸಭೆಯ ಉಪಚುನಾವಣೆ ಘೋಷಣೆಯಾಗಿದ್ದು, ಇದರಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.
 ಇದು ಮಹಾನಗರಪಾಲಿಕೆ ವತಿಯಿಂದ ನಡೆಯುವ ದಸರಾ ಕಾರ್ಯಕ್ರಮಕ್ಕೆ ತೀವ್ರ ಅಡಚಣೆಯಾಗಿದೆ ಎಂದರೆ ತಪ್ಪಾಗಲಾರದು. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಅನ್ವಯವಾಗಿದ್ದು, ಪಾಲಿಕೆಯ ಸದಸ್ಯರನ್ನೊಳಗೊಂಡು ರಚನೆಯಾಗಿದ್ದ ದಸರಾ ಆಚರಣೆಯ ವಿವಿಧ ಸಮಿತಿಗಳನ್ನು ಜಿಲ್ಲಾಧಿಕಾರಿಗಳು ವಿಸರ್ಜನೆ ಗೊಳಿಸಿದ್ದಾರೆ.
ದಸರಾ ಆಚರಣೆಯಲ್ಲಿ ಮಹಿಳಾ ದಸರಾ, ಆಹಾರ ದಸರಾ, ರಂಗದಸರಾ, ಯುವದಸರಾ, ರೈತ ದಸರಾ, ಚಲನಚಿತ್ರ ದಸರಾ ಸೇರಿದಂತೆ ವಿವಿಧ ಪ್ರಾಕಾರದ ಸುಮಾರು ೧೫ಕ್ಕೂ ಹೆಚ್ಚು ವಿವಿಧ ಬಗೆಯ ದಸರಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದಕ್ಕಾಗಿ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗುತ್ತಿತ್ತು. ಆದರೆ  ಈ ಬಾರಿ  ನೀತಿ ಸಂಹಿತೆಯಿಂದಾಗಿ ಇದ್ಯಾವುದೂ ನಡೆಯುತ್ತಿಲ್ಲ.
ಅ.೧೯ರಂದು ವಿಜಯದಶಮಿ ಪ್ರಯುಕ್ತ ನಗರದ ಶಿವಪ್ಪನಾಯಕ ಅರಮನೆಯಿಂದ ಹಳೇ ಜೈಲು ಮೈದಾನದವರೆಗೆ ನಗರದ ವಿವಿಧ ದೇವಾನುದೇವv ಗಳ ವೈಭವದ ಮೆರವಣಿಗೆ ಪ್ರತೀ ವರ್ಷದಂತೆ ಈ ವರ್ಷವೂ ಸಹ ನಡೆಯಲಿದೆ. ಆದರೆ, ಅಂಬಾರಿ ಈ ಬಾರಿ ನಡೆಯುತ್ತಿಲ್ಲ. ಬದಲಾಗಿ ಲಾರಿಯ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೆರವಣಿಗೆ ಮುಖಾಂತರ ಬನ್ನಿ ಮುಡಿಯುವ ಸ್ಥಳಕ್ಕೆ ಕರೆತರಲಾಗುತ್ತದೆ.
ಒಟ್ಟಾರೆ ಈ ಬಾರಿಯ ದಸರಾ ಕಾರ್ಯಕ್ರಮ ಜನಪ್ರತಿನಿಧಿಗಳು ಪಾಲ್ಗೊಳ್ಳದೇ ಅಧಿಕಾರಿ ವರ್ಗದ ನೇತೃತ್ವದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದ್ದು, ಪ್ರತೀ ವರ್ಷವೂ ಸಹ ಜಗಮಗಿಸುತ್ತಿದ್ದ ನಾಡಹಬ್ಬ ದಸರಾ ಈ ಬಾರಿ ಚುನಾವಣಾ ನೀತಿ ಸಂಹಿತೆ  ಹಿನ್ನೆಲೆಯಲ್ಲಿ ಮಂಕು ಕವಿದಂತಾಗಿದೆ.

Leave a Reply

Your email address will not be published. Required fields are marked *

*