Cnewstv / 13.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೀಪಾವಳಿ ಸಂಭ್ರಮಕ್ಕೆ ಅಂಟಿಗೆ ಪಂಟಿಗೆ ಸಾಥ್
ಶಿವಮೊಗ್ಗ : ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಕಲೆ. ಅವಂಟಿಗ್ಯೋ-ಪವಂಟಿಗ್ಯೋ, ಅಡೀಪೀಡಿ, ಅಂಟಿ ಪಂಟಿ, ಅವಟಿಗೋ ಪವಟಿಗೋ, ಜೌಂಟಿಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಭಾನುವಾರ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ ಅಂಟಿಕೆ ಪಂಟಿಕೆ ಪದಗಳ ಮೂಲಕ ಶುಭ ಹಾರೈಸಿತು.
ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ ಸಂಜೆ ಹೊರಟ ಅಂಟಿಕೆ ಪಂಟಿಕೆಯ ಎರಡು ತಂಡಗಳನ್ನು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು. ನಗರದ ಸುಮಾರು 80 ಕ್ಕು ಹೆಚ್ಚು ಮೆನೆಗಳಿಗೆ ಅಂಟಿಕೆ ಪಂಟಿಕೆ ತಂಡ ಬೆಳಗಿನ ಜಾವದವರೆಗೂ ತೆರಳಿತು.
‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಂಟಿಕೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.
ಕಾರ್ಯಕ್ರಮವನ್ನು ಪೋಲೀಸ್ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಉದ್ಘಾಟಿಸಿ ತಂಡದೊಂದಿಗೆ ಹೆಜ್ಜೆ ಹಾಕಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ, ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಭೈರಾಪುರ ಶಿವಪ್ಪಮೇಷ್ಟು, ದೇವರಾಜ್, ಬಿ.ಟಿ.ಅಂಬಿಕಾ, ಮಹಾದೇವಿ, ಪಿ.ಕೆ.ಸತೀಶ್, ಶ್ರೀನಿವಾಸ ನಗಲಾಪುರ, ಸುಶೀಲ ಷಣ್ಮುಗಂ, ಸಿ.ಎಂ.ನೃಪತುಂಗ, ಲಲಿತಮ್ಮ, ಲೀಲಾವತಿ, ವಾಸಪ್ಪಗೌಡ, ಯೋಗೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
#ಅಂಟಿಗೆ-ಪಂಟಿಗೆ #ಜನಪದ #ಮಲೆನಾಡು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv