Breaking News

ನಿರುದ್ಯೋಗಿ ಪದವೀಧರ ಯುವಕರಿಗೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ, NSUI ವತಿಯಿಂದ ಸಂಭ್ರಮಾಚರಣೆ.

Cnewstv / 20.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಿರುದ್ಯೋಗಿ ಪದವೀಧರ ಯುವಕರಿಗೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ, NSUI ವತಿಯಿಂದ ಸಂಭ್ರಮಾಚರಣೆ.

ಶಿವಮೊಗ್ಗ : ಕಾಂಗ್ರೆಸ್‍ನ 4ನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ‘ಯುವನಿಧಿ’ ಅಡಿಯಲ್ಲಿ ಯುವಕರಿಗಾಗಿ ರಾಹುಲ್ ಗಾಂಧಿಯವರು ನಿರುದ್ಯೋಗ ಭತ್ಯೆ ಘೋಷಿಸಿರುವುದಕ್ಕೆ ಎನ್.ಎಸ್.ಯು.ಐ. ಕಾರ್ಯಕರ್ತರು ಇಲ್ಲಿನ ಭಗವಾನ್ ಮಹಾವೀರ ವೃತ್ತದಲ್ಲಿ ಇಂದು ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯಾವಂತ ಯುವಕರು ನಿರುದ್ಯೋಗದಿಂದ ಭ್ರಮನಿರಸನಕ್ಕೊಳಗಾಗಿದ್ದಾರೆ. ಅವರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು ಯುವನಿಧಿ ಅಡಿಯಲ್ಲಿ ಘೋಷಿಸಿರುವ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ, ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂ.ಗಳ ನಿರುದ್ಯೋಗ ಭತ್ಯೆ ಆಶಾಕಿರಣವಾಗಿದೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್ ಜನಪರವಾಗಿರುವ ಪಕ್ಷ. ಕಾಂಗ್ರೆಸ್ ಆಡಳಿತ ನಡೆಸಿದಾಗ ಎಂದೂ ಜನವಿರೋಧಿಯಾಗಿ ನಡೆದುಕೊಂಡಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಹುತೇಕ ಎಲ್ಲಾ ಭರವಸೆಗಳನ್ನೂ ಈಡೇರಿಸಿತ್ತು. ಈಗ ನಿರುದ್ಯೋಗಿ ಯುವಕರಿಗೆ ಆಸರೆಯಾಗಲಿ ಯುವನಿಧಿ ಯೋಜನೆಯನ್ನು ಘೋಷಿಸಿದ್ದಾರೆ. ಯುವಕರು ಕಾಂಗ್ರೆಸ್ ಪರವಾಗಿರಬೇಕೆಂದು ಮನವಿ ಮಾಡಿದರು.

ಮಾಜಿ ವಿಧಾನಸಭೆ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯದ ಜನತೆಗೆ ಮೂರು ಗ್ಯಾರಂಟಿಗಳನ್ನು ನೀಡಿದೆ. ಮನೆಯೊಡತಿಗೆ ಮಾಸಿಕ 2 ಸಾವಿರ ರೂ. ಭತ್ಯೆ, ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗ್ಯಾರಂಟಿಯನ್ನು ನೀಡಿದೆ. ಈಗ ನಾಲ್ಕನೇ ಗ್ಯಾರಂಟಿಯಾಗಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 1500-3000 ರೂ.ಗಳ ನಿರುದ್ಯೋಗ ಭತ್ಯೆಯ ಗ್ಯಾರಂಟಿ ನೀಡುತ್ತಿದ್ದು, ಕಾಂಗ್ರೆಸ್ ಎಂದಿಗೂ ಜನಪರ, ಯುವಪರ ಪಕ್ಷವಾಗಿದೆ ಎಂದರು.

ಸಂಭ್ರಮಾಚರಣೆಯ ನೇತೃತ್ವವನ್ನು ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ವಿಜಯ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಕಲೀಂ ಪಾಶಾ, ವಿಜಯಕುಮಾರ್ (ದನಿ), ಜಿ. ಪಲ್ಲವಿ, ವಿಶ್ವನಾಥ್ ಕಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೀಪಕ್ ಸಿಂಗ್, ಕಲೀಮ್ ಪಾಷಾ, NSUI ಜಿಲ್ಲಾಧ್ಯಕ್ಷ ವಿಜಯ್, ಹರ್ಷಿತ್, ಕಾಟಿಕೆರೆ ರವಿ, ಅಬ್ದುಲ್, ವರುಣ್ ವಿ ಪಂಡಿತ್, ಕುಮಾರ್, ಟೋಫಿಕ್, ಅಭಿ, ಚಂದ್ರ ಜಿ ರಾವ್, ಚರಣ್, K.ಚೇತನ್, ಸಿ.ಜಿ. ಮಧುಸೂದನ್ ಸೇರಿದಂತೆ ಹಲವರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

Leave a Reply

Your email address will not be published. Required fields are marked *

*