Breaking News

ಫೆ. 27 ರಂದು ಮೋದಿಯವರಿಂದ 1789 ಕೋಟಿ ರೂ. ಕಾಮಗಾರಿ ಉದ್ಘಾಟನೆ ಹಾಗೂ 3377 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ.

Cnewstv / 16.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಫೆ. 27 ರಂದು ಮೋದಿಯವರಿಂದ 1789 ಕೋಟಿ ರೂ. ಕಾಮಗಾರಿ ಉದ್ಘಾಟನೆ ಹಾಗೂ 3377 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ.

ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಿಮಾನದಲ್ಲಿ ಬಂದು ಇಳಿಯುವ ಮೂಲಕ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ ಹಾಗೂ 1789 ಕೋಟಿ ರೂ. ಕಾಮಗಾರಿ ಉದ್ಘಾಟನೆ ಹಾಗೂ 3377 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರರವರು ತಿಳಿಸಿದ್ದಾರೆ.

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆ. 27 ರಂದು ಮೋದಿಯವರು ವಿಮಾನ ನಿಲ್ದಾಣದ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೂಡ ಪಾಲ್ಗೊಳ್ಳಲು ಅವಕಾಶ ಇದೆ. ಸೋಗಾನೆ ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಸಮಾರಂಭ ನಡೆಯಲಿದೆ. ಸುಮಾರು 2 ಲಕ್ಷ ಜನರು ಅಂದು ಸೇರುವ ನಿರೀಕ್ಷೆ ಇದೆ. ಅಲ್ಲಿಯೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ ಎಂದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಎರಡು ಹಂತದಲ್ಲಿ ಇದಕ್ಕಾಗಿ ಭೂಸ್ವಾಧೀನ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರವರೆಗೆ ಭೂಸ್ವಾಧೀನ ಮುಗಿದಿದೆ. 68 ಕೋಟಿ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಲಾಗಿದೆ. 612 ಕೋಟಿ ವೆಚ್ಚದಲ್ಲಿ ಮೊದಲ ಹಂತದ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ ಎಂದರು.

ಕೋಟೆಗಂಗೂರು –ರಾಮನಗರ –ಮಲ್ಲಾಪುರ –ಕೊರಲಹಳ್ಳಿ –ಶಿಕಾರಿಪುರ –ಮಾಸೂರು -ಹಲಗೇರಿ ಮೂಲಕ ರಾಣೆಬೆನ್ನೂರು ತಲುಪಲಿದೆ. ಅಲ್ಲಿಂದ ಹುಬ್ಬಳ್ಳಿ ಮೂಲಕ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸಂಪರ್ಕ ಹೊಂದಲು ಸುಲಭವಾಗಲಿದೆ. ದಕ್ಷಿಣ-ಉತ್ತರ ಭಾರತಗಳ ನಡುವೆ ಈ ರೈಲ್ವೆ ಮಾರ್ಗ ಸೇತುವೆ ಆಗಲಿದೆ ಎಂದರು.

ಕೋಟೆಗಂಗೂರಿನಲ್ಲಿ 76 ಕೋಟಿ ರೂ. ವೆಚ್ಚದಲ್ಲಿ ಕೋಚಿಂಗ್ ಡಿಪೋ ಸ್ಥಾಪನೆ ಆಗಲಿದೆ. ಅಲ್ಲಿಯೇ 21 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಡಿಪೋ ಆರಂಭವಾಗಲಿದೆ. ಇವುಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1000 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ.

ಹೊಸನಗರ-ಮಾವಿನಕಟ್ಟೆ-ಆಡುಗೋಡಿ-313.56 ಕೋಟಿ ರೂ., ಬೈಂದೂರು-ನಾಗೋಡಿ ಅಗಲೀಕರಣ-395 ಕೋಟಿ ರೂ., ಶಿಕಾರಿಪುರ ಬೈಪಾಸ್-56 ಕೋಟಿ ರೂ., ತೀರ್ಥಹಳ್ಳಿ-ಮೇಗರವಳ್ಳಿ-ಆಗುಂಬೆ-96.20 ಕೋಟಿ ರೂ., ಭಾರತೀಪುರ ರಸ್ತೆ-56 ಕೋಟಿ ರೂ., ಹೊಳೆಹೊನ್ನೂರು ಭದ್ರಾ ಸೇತುವೆ-4.60 ಕೋಟಿ ರೂ. ವೆಚ್ಚವಾಗಲಿದೆ ಎಂದರು. ಅದೇ ದಿನ ವಿದ್ಯಾನಗರ ಮೇಲು ಸೇತುವೆಯನ್ನು ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಸ್ಮಾರ್ಟ್ ಸಿಟಿಯ 44 ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಜಲಜೀವನ ಮಿಷನ್ ಯೋಜನೆಯಲ್ಲಿ 2,25,700 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿಂದೆ ಕೇವಲ 94,359 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 134 ಕೋಟಿ ರೂ. ಕಾಮಗಾರಿ ಲೋಕಾರ್ಪಣೆ ಆಗಲಿದೆ. ಅದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನರೇಂದ್ರ ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ಎಸ್. ಜ್ಯೋತಿ ಪ್ರಕಾಶ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿಶಂಕರ ನಾಯ್ಕ, ಕೆ.ವಿ.ಅಣ್ಣಪ್ಪ, ಶಿವರಾಜ್ ಇನ್ನಿತರರು ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*