Breaking News

ಎತ್ತಿನ ಓಟ ಕ್ರೀಡೆ ಮುನ್ನ ಅನುಮತಿ ಪಡೆಯದಿದ್ದಲ್ಲಿ ಕ್ರಮ: ಡಾ.ಆರ್.ಸೆಲ್ವಮಣಿ.

Cnewstv / 19.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಎತ್ತಿನ ಓಟ ಕ್ರೀಡೆ ಮುನ್ನ ಅನುಮತಿ ಪಡೆಯದಿದ್ದಲ್ಲಿ ಕ್ರಮ: ಡಾ.ಆರ್.ಸೆಲ್ವಮಣಿ.

ಶಿವಮೊಗ್ಗ : ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಗೆ ಮುನ್ನ ಸ್ಥಳೀಯ ವ್ಯಾಪ್ತಿಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಎತ್ತಿನ ಓಟ/ಎತ್ತಿನ ಗಾಡಿ ಓಟ ಕ್ರೀಡೆಯ ಮಾರ್ಗಸೂಚಿ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ(ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆ 2017 ರನ್ವಯ ಎತ್ತಿನ ಓಟ/ಎತ್ತಿನ ಗಾಡಿ ಓಟ ಆಯೋಜಿಸುವ ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಮತಿ ನೀಡುವರು ಅಥವಾ ತಿರಸ್ಕರಿಸುವರು.

ಒಂದು ವೇಳೆ ಅನುಮತಿ ಪಡೆಯದೇ ಹೋದಲ್ಲಿ ಸ್ಥಳೀಯ ಸಂಸ್ಥೆಗಳು ಜವಾಬ್ದಾರರಾಗುತ್ತಾರೆ ಹಾಗೂ ಆಯೋಜಕರ ವಿರುದ್ದ ಸೂಕ್ತ ಕ್ರಮ ವಹಿಸಲಾಗುವುದು. ಈ ಕ್ರೀಡೆಯ ಆಯೋಜನೆ ಪರಿಶೀಲಿಸಲು ಕಂದಾಯ ಇಲಾಖೆ, ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಸ್‍ಪಿಸಿಎ(ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಆಫ್ ಅನಿಮಲ್)ಪ್ರತಿನಿಧಿ ಇರುವರು.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಅಧಿಕಾರಿಗಳಿಗೆ ಸಭೆ ನಡೆಸಿ ಅರಿವು ಮೂಡಿಸಬೇಕು ಹಾಗೂ ಈ ಸಂಬಂಧ ತಂಡ ಸನ್ನದ್ದವಾಗಿರಬೇಕು ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*