ಶಿವಮೊಗ್ಗ : ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲೆಯಾದ್ಯಂತ ಇಂದಿನಿಂದ ಲಾಕ್‍ಡೌನ್ ತೆರವುಗೊಳಿಸಲಾಗಿದ್ದು, ರಾತ್ರಿ 9ಗಂಟೆಯಿಂದ ಬೆಳಿಗ್ಗೆ 5ರವರೆಗೆ ಮಾತ್ರ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವ ಹಳೆ ಶಿವಮೊಗ್ಗ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿ ಜುಲೈ 23ರ ಬೆಳಿಗ್ಗೆ 5ರಿಂದ ಜುಲೈ 29ರ ರಾತ್ರಿ 9ಗಂಟೆಯವರೆಗೆ ಸಂಪೂರ್ಣ ಸೀಲ್‍ಡೌನ್ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಹಳೆ ಶಿವಮೊಗ್ಗ ಕ್ಲಸ್ಟರ್‍ನಲ್ಲಿ ಬರುವ ವಾರ್ಡ್ ಸಂಖ್ಯೆ 22, 23, 29 ಮತ್ತು 30 ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಹಾಗೂ ಹಾಗೂ ವಾರ್ಡ್ ಸಂಖ್ಯೆ 12, 13 ಮತ್ತು 33ರಲ್ಲಿನ ಭಾಗಶಃ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಜಾರಿಯಾಗಲಿದೆ. ಬೆಕ್ಕಿನ ಕಲ್ಮಠ ಬಿ.ಹೆಚ್.ರಸ್ತೆ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್ ರಸ್ತೆಯ ತುಂಗಾ ಹೊಸ ಸೇತುವೆವರೆಗೆ ಬರುವಂತಹ ಪ್ರದೇಶದಲ್ಲಿ ಜಾರಿಯಾಗಲಿದೆ.
ಶಿವಮೊಗ್ಗ ನಗರದಲ್ಲಿ ಗುರುತಿಸಲಾಗಿರುವ 27ಕಂಟೈನ್‍ಮೆಂಟ್ ಜೋನ್‍ಗಳು ಈ ವಾರ್ಡ್‍ಗಳ ವ್ಯಾಪ್ತಿಯಲ್ಲಿದ್ದು 80ಸಕ್ರಿಯ ಕರೋನಾ ಪಾಸಿಟಿವ್ ಪ್ರಕರಣಗಳು ಇಲ್ಲಿವೆ. ಆದ್ದರಿಂದ ಈ ಪ್ರದೇಶವನ್ನು ಕ್ಲಸ್ಟರ್ ಕಂಟೈನ್‍ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿನ ಸಾರ್ವಜನಿಕರು ಈ ಅವಧಿಯಲ್ಲಿ ಸದರಿ ಪ್ರದೇಶದಿಂದ ಹೊರಗೆ ಹೋಗುವುದನ್ನು ಹಾಗೂ ಬೇರೆ ಪ್ರದೇಶದಲ್ಲಿನ ಸಾರ್ವಜನಿಕರು ಸದರಿ ಪ್ರದೇಶ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವೈದ್ಯಕೀಯ ತುರ್ತು ಚಿಕಿತ್ಸೆ ಪ್ರಕರಣಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿಷೇಧ: ಈ ಭಾಗದಲ್ಲಿ ಬರುವ ಗುಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಬೀದಿ ಬದಿ ವ್ಯಾಪಾರ, ಸಂತೆ, ಸಭೆ, ಸಮಾರಂಭ ಸಂಪೂರ್ಣ ನಿಷೇಧಿಸಲಾಗಿದೆ. ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಲ್ಲಿ ದೈನಂದಿನ ಪೂಜೆ ಪುನಸ್ಕಾರಗಳನ್ನು ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಪೂಜೆ, ಪ್ರಾರ್ಥನೆ ಮಾಡುವುದಕ್ಕೆ ಹಾಗೂ ಪ್ರವೇಶ ನಿಷೇಧಿಸಲಾಗಿದೆ. ಎಲ್ಲಾ ತರಹದ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ವಿಚಾರಣೆ ಇದ್ದಲ್ಲಿ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.