ಶಿವಮೊಗ್ಗ: ಆಮಂತ್ರಣ ಪತ್ರಿಕೆ, ಕರಪತ್ರಗಳನ್ನು ವಿವಿಧ ಡಿಸೈನ್ ಗಳಲ್ಲಿ ಮಾಡುವುದನ್ನು ನೋಡಿದ್ದೇವೆ. ಆದರೆ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆ ಹಾಗೂ ಕರಪತ್ರಗಳ ಬಳಕೆಗೆ ವಿಶೇಷ ಪ್ರಯತ್ನ ಮಾಡಿದೆ. ಇದುವರೆಗೆ ನಾವು ಸೀಡ್ ಬಾಲ್ ಗಳನ್ನು ನೋಡಿದ್ದೆವು. ಇದೀಗ ಸೀಡ್ ಪೇಪರ್ ಸಹ ಬಂದಿದೆ. ಈ ಸೀಡ್ ಪೇಪರ್ ಬಳಕೆ ಮಾಡಿದ ಮೊದಲ ಸರ್ಕಾರಿ ಇಲಾಖೆ ಹಾಗೂ ನಿಗಮ ಎಂಬ ಹೆಗ್ಗಳಿಕೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಸಲ್ಲುತ್ತದೆ..
ನಿಗಮದ ಅಧ್ಯಕ್ಷರಾದ ಡಿ.ಎಸ್ ಅರುಣ್ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ನಿಗಮ ತನ್ನ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹೊರತಂದಿರುವ ಕರಪತ್ರ ಸೀಡ್ ಪೇಪರ್ ನದ್ದಾಗಿದೆ. ಈ ಪೇಪರ್ ನಲ್ಲಿನ ಮಾಹಿತಿ ತಿಳಿದುಕೊಂಡು ಬಳಿಕ ಆ ಪೇಪರ್ ಅನ್ನು ಖಾಲಿ ಜಾಗದಲ್ಲಿ ಎಸೆದರೆ ಆ ಕಾಗದದ ಒಳಗಿರುವ ತುಳಸಿ, ಸೂರ್ಯ ಕಾಂತಿ ಹಾಗು ಚೆಂಡುಹೂವಿನ ಬೀಜಗಳು ಮೊಳಕೆ ಒಡೆದು ಗಿಡವಾಗಲಿವೆ. ಇಂಥ ಪರಿಸರ ಸ್ನೇಹಿ ವಿಭಿನ್ನ ಪ್ರಯತ್ನಕ್ಕೆ ಆರ್ಯವೈಶ್ಯ ಸಮುದಾಯ ಅಭಿವೃದ್ಧಿನಿಗಮ ಮುಂದಾಗಿರುವುದು ವಿಶೇಷವೇ ಸರಿ..