ಶಿವಮೊಗ್ಗ : ಅಖಾಡದ ಸುತ್ತಲೂ ಕಿಕ್ಕಿರಿದ ಪ್ರೇಕ್ಷಕರು, ಮೈದಾನದ ಪಕ್ಕದಲ್ಲಿರುವ ಕಟ್ಟಡಗಳ ಮೇಲೆ ಕುಳಿತಿದ್ದ ಜನ. ಇದು ಕ್ರಿಕೆಟ್ ಟೂರ್ನಿ ಅಥವಾ ಪ್ರೋ ಕಬಡ್ಡಿ ನೋಡಲು ಸೇರಿದ್ದ ಪ್ರೇಕ್ಷಕರಲ್ಲ ಬದಲಾಗಿ ನಮ್ಮ ಗ್ರಾಮೀಣ ಸೊಗಡಿನ ಕ್ರೀಡೆ ಕುರಿಕಾಳಗ ವೀಕ್ಷಣೆಗೆ ಸೇರಿದ್ದ ಜನಸಾಗರ. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಸಮಿತಿಯಿಂದ ಕೋಟೆ ಮಾರಿಕಾಂಬ ಜಾತ್ರೆ ಅಂಗವಾಗಿ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ಕುರಿ ಕಾಳಗವನ್ನು ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. 2, 4, 6 ಹಾಗೂ 8 ಹಲ್ಲಿನ ಕುರಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುರಿಗಳು ಅಖಾಡದಲ್ಲಿ ಒಂದಕ್ಕೊಂದು ತಲೆತಲೆಯನ್ನು ಗುದ್ದಿಕೊಂಡಾಗ ಜನರ ಉದ್ಘಾರ ಮುಗಿಲುಮುಟ್ಟುತ್ತಿತ್ತು. ಇನ್ನು ಕೆಲ ಕುರಿಗಳು ಅಖಾಡಕ್ಕೆ ಬರಲು ಹಿಂದೇಟು ಹಾಕುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಇನ್ನು ಕೆಲ ಕುರಿಗಳು ಗುದ್ದುವ ರಭಸಕ್ಕೆ ಎದುರಾಳಿ ಕುರಿ ಮಾರುದೂರ ಹೋಗಿ ಬೀಳುತ್ತಿದ್ದವು. ಜನಸಾಗರದ ಹಾಗೂ ಅವರ ಉದ್ಘಾರದ ನಡುವೆ ನಡೆದ ಕುರಿ ಕಾಳಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಕುರಿಕಾಳಗದಲ್ಲಿ 300 ಕ್ಕೂ ಹೆಚ್ಚು ಕುರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕುರಿಕಾಳಗದ ಪ್ರತಿಭಾಗಕ್ಕೂ ಪ್ರತ್ಯೇಕ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ..