ಶಿವಮೊಗ್ಗ ; 12ನೇ ಶತಮಾನದಲ್ಲಿನ ಮೂಢನಂಬಿಕೆಗಳು, ಜಾತಿ ಪದ್ಧತಿ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾಯಕ ಶರಣರ ಕೊಡುಗೆ ಅಪಾರವಾದುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಶರಣರು, ಬಸವಣ್ಣ, ಅಕ್ಕಮಹಾದೇವಿ ಅನೇಕ ಜ್ಞಾನಿಗಳು 12ನೇ ಶತಮಾನದಲ್ಲಿ ಬಂದು ಹೋಗಿದ್ದಾರೆ. ಹೀಗಾಗಿ ಹನ್ನೆರಡನೇ ಶತಮಾನ ಬಹಳ ಮಹತ್ವದ ಶತಮಾನವೆಂದು ಎಂದರು.
ಸಮಾಜದ ಸುಧಾರಣೆ ಆಗಬೇಕಾದರೆ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ. ಸಮಾಜದಲ್ಲಿ ಕೆಲವು ಜಯಂತಿಗಳನ್ನು ಆಚರಿಸಿದರೆ ಸಾಲದು. ಪಠ್ಯಪುಸ್ತಕಗಳಲ್ಲಿ ಇವರ ತತ್ವಗಳನ್ನು ಅಳವಡಿಸಬೇಕು. ಸಮಾಜದಲ್ಲಿ ಸಮಾನತೆ ಸಾರುವುದು ಬಹುಮುಖ್ಯವಾಗಿದೆ ಎಂದರು.
ಸಮಾಜದವರು ತಮ್ಮ ಮಕ್ಕಳಿಗೆ ಸರ್ವಜ್ಞ,ಶರಣರ,ಸಾಧಕರ ಜೀವನ ಚರಿತ್ರೆ ತಿಳಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸುವ ಕುರಿತಂತೆ ಅಂದಿನ ಅನೇಕ ವಚನಕಾರರು ತಮ್ಮ ಪರಿಣಾಮಕಾರಿಯಾದ ವಚನಗಳನ್ನು ರೂಪಿಸುವ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಬಸವಣ್ಣ, ಅಕ್ಕಮಹಾದೇವಿ ಕಾಲಘಟ್ಟದಲ್ಲಿ ಅನೇಕ ದಲಿತ ವಚನಕಾರರು ಸಾಹಿತ್ಯಲೋಕಕ್ಕೆ ಅನೇಕ ವಚನಗಳನ್ನು ನೀಡಿದ್ದಾರೆ. ಇಂದು ನಾವೆಲ್ಲ ಅವರನ್ನು ನನೆಯುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಾಕ್ಷಾಯಿಣಿ ರಾಜಕುಮಾರ್ ಮತ್ತು ತಂಡದವರಿಂದ ವಚನ ಗಾಯನ ಹಾಗೂ ಎಸ್. ಜೆ. ವಿ.ಸಿ. ಕಾಲೇಜು, ಹರಿಹರ ಸಹ ಪ್ರಾಧ್ಯಾಪಕ ಡಾ. ಎ. ಬಿ. ರಾಮಚಂದ್ರಪ್ಪ ಇವರಿಂದ ಕಾಯಕ ಶರಣರ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್ ಉಮೇಶ್, ಸಮಾಜದ ಮುಖಂಡ ಹಾಲೇಶಪ್ಪ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.