ಶಿವಮೊಗ್ಗ: ಹನಿಟ್ರ್ಯಾಪ್ ಪ್ರಕರಣದ ವಿಚಾರದಲ್ಲಿ ಸಿಎಂ ನ್ಯಾಯ ಬದ್ದವಾದ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು. ಅದರ ನಂತರವೂ ವಿಪಕ್ಷದವರು ಮಾತನಾಡಿ, ಗದ್ದಲ ಸೃಷ್ಟಿಸುವ ಅವಶ್ಯಕತೆ ಇರಲಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ತಪ್ಪಾದರೂ ನ್ಯಾಯ ಕೊಡಲು ಕಾನೂನು ಇದೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಗೌರವವಿದೆ. ಅದೇ ರೀತಿ ಸ್ಪೀಕರ್ ಪೀಠಕ್ಕೂ ಕೂಡ. ಆ ಪೀಠಕ್ಕೆ ಅಗೌರವ ನೀಡಬಾರದು. ಸ್ಪೀಕರ್ ಅವರ ಇತಿಮಿತಿಯಲ್ಲಿ ಒಳ್ಳೆಯ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಪ್ರಕಾರ ಆ ತೀರ್ಮಾನವನ್ನು ಸಡಿಲ ಮಾಡಬಾರದು. ಜನ ವೀಕ್ಷಣೆ ಮಾಡ್ತಾ ಇರ್ತಾರೆ ವಿಧಾನ ಸಭೆಯಿಂದ ಒಳ್ಳೆಯ ಸಂದೇಶ ಹೋಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕಳೆದ ಮಳೆಗಾಲದಲ್ಲಿ ಪುರದಾಳು ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ವೇಳೆ ಬಾರೇಹಳ್ಳ ಡ್ಯಾಂ ನಿಂದ ಸಾಕಷ್ಟು ನೀರು ಪೋಲಾಗುತ್ತಿತ್ತು. ಜೊತೆಗೆ ಡ್ಯಾಂಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಂ ದುರಸ್ತಿಗೆ ಅನುದಾನ ಕೊಡಿಸಿ, ಇಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಪುರದಾಳ್ ನ ಬಾರೇಹಳ್ಳ ಡ್ಯಾಂ ಹಾಗೂ ಹಾಯ್ ಹೊಳೆ ಡ್ಯಾಂನ ದುರಸ್ತಿ ಗೆ 6 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತೆ. ಅದರ ಜೊತೆಗೆ ಪುರದಾಳು ಗ್ರಾಮದ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿದ್ದೇನೆ ಎಂದರು.
ಈ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥ ರೈತರು ಹೆಚ್ಚಿದ್ದಾರೆ. ಅವರಿಗೆ ಭೂಮಿ ಹಕ್ಕು ನೀಡಲು ಸರ್ಕಾರ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರದ ಸಹಕಾರದಿಂದ ರಾಜ್ಯ ಸರ್ಕಾರದಿಂದ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಭೂಮಿಯ ಹಕ್ಕನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
