ರೌಡಿ ಶೀಟರ್ ಗೋವಿಂದ ಕೊಲೆ ಆರೋಪಿಗಳ ಬಂಧನ
ಶಿವಮೊಗ್ಗ: ಇಲ್ಲಿನ ಗಾರ್ಡನ್ ಏರಿಯಾ ಎರಡನೇ ತಿರುವಿನಲ್ಲಿ ರೌಡಿ ಶೀಟರ್ ಮಾರ್ಕೆಟ್ ಗೋವಿಂದನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಜನವರಿ 30 ರಂದು ಮಾರ್ಕೆಟ್ ಗೋವಿಂದನನ್ನು ರೌಡಿ ಶೀಟರ್ ಖರಾಬ್ ಶಿವು ತನ್ನ ಸಹಚರರೊಂದಿಗೆ ಸೇರಿ ಕೊಲೆ ಮಾಡಿ ಬಳಿಕ ತಲೆ ಮರೆಸಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಪೇಟೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಪ್ರಕರಣ ನಡೆದು ನಾಲ್ಕು ತಿಂಗಳ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೀತಾರಾಮ ಅಲಿಯಾಸ್ ಖರಾಬ್ ಶಿವು, ಎಸ್.ಕೆ.ನಾಗರಾಜ್ ಅಲಿಯಾಸ್ ನಾಗಿ, ಸುಬ್ರಹ್ಮಣ್ಯ ಅಲಿಯಾಸ್ ಸುಬ್ಬು ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳಾದ ಚೇತನ್, ಸಂಜಯ್, ಮಂಜುನಾಥ್, ರಿಜ್ವಾನ್, ಸಂದೇಶ್, ಪ್ರೇಮರಾಜ್, ಶಿವರಾಜ್, ಲಕ್ಷ್ಮಮ್ಮ ಅವರನ್ನು ಈ ಹಿಂದೆಯೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
Recent Comments