Cnewstv / 21.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಗಳೆಲ್ಲಾ ಕಳಪೆ
ಶಿವಮೊಗ್ಗ : ನಿನ್ನೆ ಒಂದೇ ದಿನ ಬಿದ್ದ ಸಣ್ಣ ಮಳೆಗೇ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದು ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಂಡ ಕಾಮಗಾರಿಗಳೆಲ್ಲಾ ಕಳಪೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪಾಲಿಕೆಯ ಆಡಳಿತಾರೂಢ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾಗಿದೆ ಎಂದು ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ಯಾವುದೇ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದೇ ಅವೈಜ್ಞಾನಿಕವಾಗಿ ಅರೆಬರೆಯಾಗಿ ನಡೆಸಲಾಗಿದೆ.
ಯುಜಿಡಿ, ಚರಂಡಿ ವ್ಯವಸ್ಥೆಯನ್ನು ಹಾಳುಮಾಡಲಾಗಿದೆ. ನಿನ್ನೆ ಬಿದ್ದ ಒಂದು ಸಣ್ಣ ಮಳೆಗೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ, ಪಾಲಿಕೆಯ ಬಿಜೆಪಿ ಆಡಳಿತ ಜನೋಪಯೋಗಿ ಕೆಲಸ ಮಾಡುವುದಕ್ಕಿಂತ ಜನರಿಗೆ ತೊಂದರೆ ಕೊಡಲೆಂದೇ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ನಡೆಸಿದಂತಾಗಿದೆ.
ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿತ್ತು. ವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಒತ್ತಾಯಿಸಿತ್ತು. ಆದರೆ, ಸ್ಮಾರ್ಟ್‍ಸಿಟಿ ಅಧಿಕಾರಿಗಳು, ಪಾಲಿಕೆ ಆಡಳಿತ ಜನರ ಹಿತ ಮರೆತು ಮನಸೋ ಇಚ್ಛೆ ಕಾಮಗಾರಿ ನಡೆಸಿರುವುದರಿಂದ ಜನತೆ ಈಗ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೂ ಮಳೆ ಆರಂಭವಾಗುವ ಮುನ್ನವೇ ಇಂತಹ ಅವಾಂತರಗಳಾದರೆ ಮುಂದಿನ ದಿನಗಳಲ್ಲಿ ಜನರ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೇ ಪಾಲಿಕೆಯ ಆಡಳಿತಾರೂಢ ಬಿಜೆಪಿ ಎಚ್ಚೆತ್ತುಕೊಳ್ಳಬೇಕು. ಅವೈಜ್ಞಾನಿಕ ಕಾಮಗಾರಿ ನಡೆಸಿದವರ ವಿರುದ್ಧ ತನಿಖೆ ನಡೆಸಬೇಕು. ಇಲ್ಲವಾದರೆ ಮುಂದಿನ ಪಾಲಿಕೆಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments