Cnewstv / 3.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮುಂಗಾರು ಹಂಗಾಮು : ಕೃಷಿ ಇಲಾಖೆ ಸಿದ್ದತೆಗಳು
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈಗಾಗಲೇ ಉತ್ತಮ ಹಂಗಾಮು ಪೂರ್ವ ಮಳೆ ಆರಂಭವಾಗಿದ್ದು ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆ ಬರುವ ನಿರೀಕ್ಷೆಯೊಂದಿಗೆ ರೈತರು ಭರದಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮೇ 31 ಕ್ಕೆ ಅಂತ್ಯಗೊಂಡಂತೆ 127 ಮಿ.ಮಿ.ವಾಡಿಕೆ ಮಳೆಯಿದ್ದು, 82 ಮಿ.ಮಿ. ವಾಸ್ತವಿಕ ಮಳೆಯಾಗಿದೆ. ಶೇ.36 ಮಳೆಯ ಕೊರತೆ ಉಂಟಾಗಿರುತ್ತದೆ.
ಬೆಳೆ ಗುರಿ: ಜಿಲ್ಲೆಯಲ್ಲಿ ಭತ್ತ ಮತ್ತು ಮುಸುಕಿನ ಜೋಳವು ಪ್ರಧಾನ ಬೆಳೆಯಾಗಿದೆ. 2023 ರ ಮುಂಗಾರಿನಲ್ಲಿ 77640 ಹೆಕ್ಟೇರ್ ಭತ್ತ, 48770 ಹೆಕ್ಟೇರ್ ಮುಸುಕಿನಜೋಳ, 490 ಹೆಕ್ಟೇರ್ ಇತರೆ ಏಕದಳ, 415 ಹೆಕ್ಟೇರ್ ದ್ವಿದಳಧಾನ್ಯ ,97 ಹೆಕ್ಟೇರ್ ಎಣ್ಣೆಕಾಳು ಹಾಗೂ 1223 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ : ಈ ಎಲ್ಲಾ ಬೆಳೆಗಳಿಗೆ 25715 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು, ಈಗಾಗಲೇ ಕೆಎಸ್ ಎಸ್‍ಸಿ/ಎನ್.ಎಸ್.ಸಿ/ಖಾಸಗಿ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಬಿತ್ತನೆ ಬೀಜ ವಿತರಣೆಗೆ ಯಾವುದೇ ಕೊರತೆ ಇರುವುದಿಲ್ಲ. ನಿಗದಿತ ಗುರಿಯನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಶೇಕಡ 100 ಕ್ಷೇತ್ರದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ.
ರಸಗೊಬ್ಬರ: ಅದೇ ರೀತಿ ಜಿಲ್ಲೆಗೆ 2023 ರ ಮುಂಗಾರು ಹಂಗಾಮಿಗೆ 90334 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರದ ಅವಶ್ಯಕತೆ ಇದ್ದು ಕೆಎಸ್‍ಎಸ್‍ಸಿ/ಕೆಎಸ್‍ಸಿಎಂಎಫ್/ಖಾಸಗಿ ವತಿಯಿಂದ ಈಗಾಗಲೇ 63208 ಮೆ.ಟನ್ ವಿವಿಧ ರಸೊಬ್ಬರಗಳ ದಾಸ್ತಾನು ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ಹಾಗೆಯೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ಕೀಟ/ ರೋಗ ಬಾಧೆಗೆ ಅವಶ್ಯವಾದ ಕೀಟನಾಶಕಗಳನ್ನು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿರುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕರಾದ ಪೂರ್ಣಿಮಾ ತಿಳಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments