ಶಾಸಕರಿಗೆ ಅಚಾಚ್ಯ ಶಬ್ದಗಳಿಂದ ನಿಂದನೆ, ಶಾಸಕರಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಶಿವಮೊಗ್ಗ: ಸಾಗರದ ಶಾಸಕ ಹರತಾಳು ಹಾಲಪ್ಪ ಅವರಿಗೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ಸಿಟ್ಟಿಗೆದ್ದ ಹಾಲಪ್ಪ ಅವರು ನಿಂದಿಸಿದವನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಾಗರದಲ್ಲಿ ಆಯೋಜಿಸಿದ್ದ ಕನ್ನಡ ಸೇನೆಯ ಮೆರವಣಿಗೆ ನಡೆಯುತ್ತಿದ್ದ ಮಾರ್ಗವಾಗಿಯೇ ಶಾಸಕ ಹರತಾಳು ಹಾಲಪ್ಪ ಅವರ ಕಾರು ಬಂದಿದೆ. ಮೆರವಣಿಗೆ ನಡೆಯುತ್ತಿದ್ದರಿಂದ ರಸ್ತೆಯಲ್ಲಿ ಕಾರು ಹೋಗಲು ಜಾಗವಿಲ್ಲದಿದ್ದರಿಂದ ಶಾಸಕರು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಶಾಸಕರನ್ನು ನೋಡಿದ ಮೆರವಣಿಗೆಯಲ್ಲಿದ್ದ ವ್ಯಕ್ತಿಯೊಬ್ಬ ಶಾಸಕರನ್ನು ಅವಾಚ್ಯವಾಗಿ ಬೈಯಲು ಆರಂಭಿಸಿದ್ದಾನೆ. ಆಗ ಸಿಟ್ಟಿಗೆದ್ದು ಹಾಲಪ್ಪ ಕಾರಿನಿಂದ ಇಳಿದಾಗ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಬಳಿಕ ಹಾಲಪ್ಪ ಅವರು ಸಾಗರ ನಗರ ಪೊಲೀಸ ಠಾಣೆಗೆ ತೆರಳಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ತಪ್ಪಿತಸ್ಥನ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆಗ ಪೊಲೀಸರು ಮೆರವಣಿಗೆಯಲ್ಲಿ ಹೋಗುತ್ತಿದ್ದವರಿಗೆ ಎಚ್ಚರಿಕೆ ನೀಡಿ ಬಳಿಕ ಶಾಸಕರನ್ನು ಹಾಗೂ ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ..
Recent Comments